ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ
ನರಸಿಂಹರಾಜಪುರ: ತಾಲೂಕಿನ 14 ಗ್ರಾಪಂ ಪೈಕಿ ಕನಿಷ್ಠ 2 ಗ್ರಾಪಂ ನಿವೇಶನರಹಿತರಿಗೂ ನಿವೇಶನ ಕೊಡಲು ಸಾಧ್ಯವಾಗಿಲ್ಲ ಎಂದು ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸಾಮರ್ಥ್ಯ ಸೌಧದಲ್ಲಿ ನಡೆದ ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಜಾಗದ ಬಗ್ಗೆ ಗೊಂದಲ ಇನ್ನೂ ಮುಂದುವರಿಯುತ್ತಿದೆ. ನಿವೇಶನಕ್ಕೆ ಎಂದು ಗುರುತು ಮಾಡಿದ ಕಡತವು ಡಿಎಫ್ಓ ಕಚೇರಿಗೆ ಹೋದರೆ ಅದು ಹೊರಬರಲು ಕಾಲು ಶತಮಾನ ಬೇಕಾಗುತ್ತದೆ ಎಂದರು.
ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್ ಮಾತನಾಡಿ, ಒಂದು ದಿನಾಂಕ ಗೊತ್ತು ಮಾಡಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆ ಕರೆದು ಚರ್ಚೆ ನಡೆಸೋಣ. ಸ್ಥಳ ಪರಿಶೀಲನೆ ಮಾಡಿ ಜಾಗ ಸರ್ವೆ ಮಾಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
19 ರಂದು ಪಲ್ಸ್ ಪೋಲಿಯೋ: ಜ. 19 ಹಾಗೂ ಫೆಬ್ರವರಿ 23 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲಾ ಸಂಘ- ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಪಿ.ಪ್ರಭಾಕರ್ ಸಭೆಗೆ ವಿನಂತಿಸಿಕೊಂಡರು.
ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರ ಉಪಸ್ಥಿತರಿದ್ದರು. ಅರಣ್ಯ ಇಲಾಖೆ, ಕಂದಾಯ, ಶಿಕ್ಷಣ, ಅಬಕಾರಿ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತಾಪಂ ಎಲ್ಲಾ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.