ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಡಿವಾಳರ ಜಾಗೃತಿ ಸಮಾವೇಶ

Vishwanath S
Updated On : 1 Jan 2014, 1:15 am

ಚಿಕ್ಕಮಗಳೂರು: ರಾಜ್ಯ ಮಡಿವಾಳರ ಜಾಗೃತಿ ಸಮಾವೇಶ ಜ. 5 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಈಶ್ವರಹಳ್ಳಿ ಲಕ್ಷ್ಮಣ ತಿಳಿಸಿದ್ದಾರೆ.
ಜಿಲ್ಲಾ ಮಡಿವಾಳರ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಮಡಿವಾಳ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಸ್ತ ಮಡಿವಾಳರ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ಕುಲ ಕಸುಬಾದ ಮಡಿವಾಳ ವೃತ್ತಿಯನ್ನೆ ನಂಬಿ ಬದುಕುತ್ತಿರುವವರ ನೋವು- ಕಷ್ಟದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಬೃಹತ್ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಇದರಲ್ಲಿ ಜಿಲ್ಲೆಯಿಂದ 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಡಿವಾಳ ಜನಾಂಗವನ್ನು 17 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿರುವಂತೆ ಕರ್ನಾಟಕದಲ್ಲಿಯೂ ಕ್ರಮ ಕೈಗೊಳ್ಳಬೇಕು.
ಕುಲಗುರುಗಳಾದ ಮಡಿವಾಳ ಮಾಚಿದೇವರ ಜನ್ಮದಿನವನ್ನು ಪರಿಗಣಿಸಿ ಸಂವಿಧಾನಾತ್ಮಕವಾಗಿ ಮಾಚಿದೇವ ಜಯಂತಿ ಘೋಷಿಸಿ ಆಚರಿಸಬೇಕು. ಮಾಚಿದೇವರ ಜನ್ಮಸ್ಥಳವಾದ ಬಿಜಾಪುರ ಜಿಲ್ಲೆ ಸಿಂಧಗಿ ತಾಲೂಕು ದೇವರಹಿಪ್ಪರಿಗೆ ಅಭಿವೃದ್ಧಿಪಡಿಸಿ ಅದರ ನಿರ್ವಹಣೆಗಾಗಿ ಮಾಚಿದೇವ ಪ್ರಾಧಿಕಾರ ರಚಿಸಬೇಕು. ಕುಲಗುರು ಮಾಚಿದೇವ ಅಧ್ಯಯನ ಪೀಠ ಸ್ಥಾಪಿಸುವಂತೆ ಜಾಗೃತಿ ಸಮಾವೇಶ ಆಗ್ರಹಿಸಲಿದೆ ಎಂದರು.
ಕಾರ್ಯಾಧ್ಯಕ್ಷ ಎಚ್.ಎಸ್. ನಂಜಪ್ಪ, ಮಾಜಿ ಜಿಲ್ಲಾಧ್ಯಕ್ಷ ಶಿವಮೂರ್ತಿ, ಕಡೂರು ಕೃಷ್ಣಮೂರ್ತಿ, ಎಸ್. ಶಿವಣ್ಣ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎಸ್.ವಿ. ರಾಮಚಂದ್ರ ಸ್ವಾಗತಿಸಿದರು. ಖಜಾಂಚಿ ಗಿರೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement