ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ: ದೇವೇಗೌಡ

Vishwanath S
Updated On : 1 Jan 2014, 1:15 am

ಚಿಕ್ಕಮಗಳೂರು: ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿರುವುದನ್ನು ಖಂಡಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ ವೇಳೆಯಲ್ಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರವಾಗಿ ಖಂಡಿಸಿದ್ದು, ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿ ಹಾಗೂ ನಿಷ್ಕ್ರಿಯತೆ ಎಂದು ಟೀಕಿಸಿದ್ದಾರೆ.
ಮಂಗಳವಾರ ದರ್ಗಾಕ್ಕೆ ಭೇಟಿ ನೀಡಿದ ಅವರು, ಅಂಜುಮಾನ್ ಇ- ಇಸ್ಲಾಮಿಯಾ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರನ್ನು ಭೇಟಿ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಇಲ್ಲಿ ಯಾರ ಪರವಾಗಿಯೂ ಬಂದಿಲ್ಲ ಎಂದು ಮಾತು ಆರಂಭಿಸಿದ ದೇವೇಗೌಡರು, ಇಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ತಿಳಿದುಕೊಳ್ಳಲಷ್ಟೇ ಬಂದಿದ್ದೇನೆ. ಇಲ್ಲಿ ನಡೆದಿರುವ ಘಟನೆಯಲ್ಲಿ ಯಾರೇ ಓರ್ವ ಹಿಂದುಗೂ ಪೆಟ್ಟಾಗಿಲ್ಲ ಎಂದರು.
ಅನುಮತಿ ನೀಡಿದ್ದು ಯಾರು: ದರ್ಗಾ ಅಪವಿತ್ರಗೊಳಿಸಿರುವುದನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ಮೆರವಣಿಗೆ ನಡೆಸುತ್ತಿದ್ದರು. ಇದಕ್ಕೆ ಜಿಲ್ಲಾಡಳಿತ ಅನುಮತಿ ಸಹ ನೀಡಿತ್ತು. ಅದೇ ವೇಳೆಗೆ ಬಜರಂಗದಳ ಮೆರವಣಿಗೆ ನಡೆಸಿದ ವೇಳೆಯಲ್ಲಿ ಘರ್ಷಣೆ ನಡೆದಿದೆ. ಬಜರಂಗದಳಕ್ಕೆ ಮೆರವಣಿಗೆ ನಡೆಸಲು ಅನುಮತಿ ನೀಡಿದವರು ಯಾರೆಂದು ಪ್ರಶ್ನಿಸಿದ ದೇವೇಗೌಡರು, ಆಯ್ದ ಮುಸ್ಲಿಂ ಸಮುದಾಯವರಿಗೆ ಪೊಲೀಸರು ಹೊಡೆದಿದ್ದಾರೆ. ಈ ಘಟನೆ ನಡೆದ ಬಳಿಕ ರಾಜ್ಯದ ಗೃಹ ಸಚಿವರು ಚಿಕ್ಕಮಗಳೂರಿಗೆ ಭೇಟಿ ವಾಸ್ತವಿಕತೆ ತಿಳಿದುಕೊಳ್ಳಬೇಕಾಗಿತ್ತು. ಘರ್ಷಣೆ ನಡೆದು 4 ದಿನ ಕಳೆದರೂ ಸಹ ಈವರೆಗೆ ಸಂಬಂಧಪಟ್ಟವರನ್ನು ಬಂಧಿಸಿಲ್ಲ. ಘಟನೆಯಲ್ಲಿ ಪೆಟ್ಟು ತಿದ್ದವರ ಮೇಲೆ ಕೇಸು ದಾಖಲು ಮಾಡಿದ್ದಾರೆ ಎಂದರು.
ಬಿಜೆಪಿ, ಕಾಂಗ್ರೆಸ್ ಮುಂದಿನ ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯ ನಡುವೆ ಹಂದರ ನಿರ್ಮಾಣ ಮಾಡಲು ಹೊರಟಿವೆ. ಆದರೆ, ಈ ರೀತಿಯ ರಾಜಕೀಯ ಮಾಡಲು ನಮ್ಮ ಪಕ್ಷ ಮುಂದಾಗುವುದಿಲ್ಲ. ದರ್ಗಾವನ್ನು ಅಪವಿತ್ರಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದವರ ಮೇಲೆ ಹಲ್ಲೆ ನಡೆಸಲಾಗಿದೆ. ದರ್ಗಾದೊಳಗೆ ಪೊಲೀಸರು ಶೋ ಕಾಲಿನಲ್ಲಿ ಪ್ರವೇಶ ಮಾಡಿದ್ದಾರೆ. ಯಾರನ್ನು ಮೆಚ್ಚಿಸಲು ಈ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ರೀತಿಯ ವರ್ತನೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದರು.
ಅಮಾನತಿಗೆ ಆಗ್ರಹ: ಗೃಹ ಸಚಿವರಿಗೆ ರಾಜ್ಯದ ಜನರು ಜವಾಬ್ದಾರಿ ನೀಡಿದ್ದಾರೆ. ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಈ ರೀತಿಯ ಕ್ರಮ ತೆಗೆದುಕೊಳ್ಳಲು ಅವರಿಗೆ ಏನಾಗಿದೆ ಎಂದು ಪ್ರಶ್ನಿಸಿದ ದೇವೇಗೌಡರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ಆಗ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರನ್ನು ದತ್ತಜಯಂತಿ ವೇಳೆಯಲ್ಲಿ ಬಂಧಿಸುವ ಕೆಲಸ ಮಾಡಲಾಗಿತ್ತು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವ ಈ ರೀತಿಯ ಕೃತ್ಯ ರಾಜ್ಯದಲ್ಲಿ ಎಲ್ಲೂ ನಡೆಯಬಾರದು. ಚಿಕ್ಕಮಗಳೂರಿನಲ್ಲಿ ನಡೆದಿರುವ ದರ್ಗಾ ಅಪವಿತ್ರ ಹಾಗೂ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆಯ ಘಟನೆಯ ಬಗ್ಗೆ ಸಿಸಿಬಿಯಿಂದ ತನಿಖೆ ನಡೆಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದಾಗ ಏನೆಲ್ಲಾ ಆಗಿದೆ ಎಂಬುದನ್ನು ಗಮನಿಸಿದ್ದೇನೆ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಉಲ್ಲೇಖಿಸಿದರು.
ಮಾಧ್ಯಮದ ಸೃಷ್ಟಿ:  ನರೇಂದ್ರ ಮೋದಿ ಬಗ್ಗೆ ಮಾಧ್ಯಮದವರು ಅಬ್ಬರ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ಅಬ್ಬರವನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು ತಿಳಿಸಿದರು.
ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ದೃವೀಕರಣ, ಛಿದ್ರಿಕರಣ ಮುಖ್ಯವಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಲೆಕ್ಕಚಾರ ಮಾಡಲು ಹೋಗುವುದಿಲ್ಲ. ಎಂದು ಹೇಳಿದರು.
ಇದಕ್ಕೂ ಮುನ್ನ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪೋನ್ ತೆಗೆದುಕೊಳ್ಳುವುದಿಲ್ಲ. ಆದರೆ, ಮಾಧ್ಯಮಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ವೈಎಸ್‌ವಿ ದತ್ತ, ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯ ಅಬ್ದುಲ್ ಅಜೀಂ ಹಾಗೂ ಮಾಜಿ ಶಾಸಕ. ಧರ್ಮೇಗೌಡ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.
ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಗಳವಾರ ಭೇಟಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement