ಸ್ವಾರ್ಥ ತೊರೆದರೆ ನೆಮ್ಮದಿಯ ಜೀವನ
ಚಿಕ್ಕಮಗಳೂರು: ಮನುಷ್ಯನಲ್ಲಿ ಸಂಸ್ಕಾರ, ಸಂಸ್ಕೃತಿ ಕಡಿಮೆಯಾಗಿದೆ, ಸ್ವಾರ್ಥಿಗಳಾಗಿ ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ. ಸಂತರು, ದಾರ್ಶನಿಕರ ಕಾಯಕವನ್ನು ಮೆಲುಕು ಹಾಕಿ ಅವರ ಗುಣ ಅಳವಡಿಸಿಕೊಂಡಾಗ ಸ್ವಾರ್ಥದಿಂದ ಹೊರ ಬಂದು ಶಾಂತಿ, ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಎಂ.ಇ.ಎಸ್. ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯ್ ಕುಮಾರ್ ಹೇಳಿದ್ದಾರೆ.
ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 36ನೇ ಶ್ರೀ ತ್ಯಾಗರಾಜರು ಮತ್ತು ಪುರಂದರದಾಸರ ಜಯಂತ್ಯೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿಗೆ ಪ್ರೋತ್ಸಾಹ: ಹಿರಿಯರು ಮತ್ತು ಪೂರ್ವಿಕರು ಹಾಕಿಕೊಟ್ಟ ಮಾರ್ಗ ಅನುಸರಿಸುವುದು ನಮ್ಮ ಕರ್ತವ್ಯ, ಈ ಸಂಬಂಧ ಹಲವು ದಶಕಗಳಿಂದ ದೇಶದ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಸಾಧು, ಸಂತರು, ತ್ಯಾಗಮಯಿಗಳು ಸಮಾಜದ ಬಗ್ಗೆ ಯೋಚಿಸಿ ಗೌರವವಿಟ್ಟು ಮಾನವ ಏಳಿಗೆಗೆ ಕೆಲಸ ಮಾಡಿದ್ದಾರೆ ಎಂದರು.
ಡಯಟ್‌ನ ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್ ಮಾತನಾಡಿ, ಸಂಗೀತ ದೈವತ್ವಕ್ಕೆ ಹತ್ತಿರವಾದುದು. ದಾರ್ಸನಿಕರನ್ನು ಕೊಡುಗೆಯಾಗಿ ಕೊಟ್ಟಿರುವ ನೆಲ ಇದು ಎಂದರು.
ಶಾಲೆಯ ಕೊಠಡಿಯೊಳಗಿನ ಕಲಿಕೆ ಕೃತಕವಾದದ್ದು, ಸಂಗೀತ, ಸಾಹಿತ್ಯ, ಆಟ ಸಹಜವಾದುದು ಎಂದ ಅವರು, ಆತ್ಮ, ವ್ಯಕ್ತಿ ಚರಿತೆಯನ್ನು ಏಕೆ ಓದಬೇಕೆಂದರೆ ಅಷ್ಟು ಜೀವನ ಉಳಿಸಿಕೊಳ್ಳಬೇಕಾಗಿ, ಈ ಮೂಲಕ ಸಮಾಜದ ಋಣ ತೀರಿಸೋಣ ಎಂದು ತ್ಯಾಗರಾಜರು ಮತ್ತು ಪುರಂದರ ದಾಸರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಜಯಂತ್ಯುತ್ಸವ ಉಪ ಸಮಿತಿ ಅಧ್ಯಕ್ಷ ಎಸ್. ಶ್ರೀಧರ್, ವ್ಯವಸ್ಥಾಪಕಿ ಶಾಂತಕುಮಾರಿ, ಪ್ರಾಯೋಗಿಕ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ.ಕೆ. ಶ್ರೀಧರ್, ಉಪನ್ಯಾಸಕ ಸದಾಶಿವಮೂರ್ತಿ, ಸೀತಾಲಕ್ಷ್ಮಿ ಉಪಸ್ಥಿತರಿದ್ದರು.