ಕನ್ನಡ ಬೆಳೆಸಲು ಸಾಹಿತ್ಯ ಪರಿಷತ್ ಶ್ರಮ
ಆಲ್ದೂರು: ಸಾಹಿತ್ಯ ಪರಿಷತ್ ಚಿಂತನ- ಮಂಥನಗಳು ಬರೀ ರಾಜ್ಯ, ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೆ ಹೋಬಳಿ ಮಟ್ಟಕ್ಕೆ ಬೆಳೆದಿದೆ. ಕನ್ನಡದ ಡಿಂಡಿಮ ಬೆಳಗಿಸಲು ಹಾಗೂ ಎಲ್ಲ ಮನಸ್ಸುಗಳನ್ನು ಬೆಳೆಸಲು ಸಾಹಿತ್ಯ ಪರಿಷತ್ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಷಿ ಹೇಳಿದ್ದಾರೆ.
ಆಲ್ದೂರಿನಲ್ಲಿ ಶನಿವಾರ ನಡೆದ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 4ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಹಾಗೂ ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಭಾಷೆಯ ಮೇಲೆ ಪ್ರೀತಿ ಗೌರವ ನಮ್ಮಲ್ಲಿ ನಾವು ಕಂಡು ಹಸಿರಾಗಬೇಕು, ಅದು ಸ್ವಾಭಿಮಾನದ ಸಂಕೇತವಾಗಿ ಭಾವನಾತ್ಮಕವಾಗಿ ನಾವು ನಮ್ಮ ಭಾಷೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಉಳಿಸುವ ಪ್ರಯತ್ನ: ಭಾಷೆ, ಸಂಸ್ಕೃತಿ ವೈಶಿಷ್ಟ ನೆಲಗಟ್ಟಿನಲ್ಲಿ ಉಳಿದುಕೊಂಡಿರುವುದರಿಂದ ನಾವು ಇಂತಹ ಸಮ್ಮೇಳನಗಳನ್ನು ನಡೆಸುತ್ತಿರುವ ದಿನಗಳಲ್ಲಿ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನ ಸಮ್ಮೇಳನದ ಉದ್ದೇಶವಾಗಿರಬೇಕು. ಸಮಾಜದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಹಾಗೂ ಎಲ್ಲರಿಗೂ ಒಪ್ಪುವಂತ ಸಾಹಿತ್ಯ ಬರವಣಿಗೆಯ ಅಗತ್ಯವಿದೆ. ಸಾಹಿತ್ಯ ಯಾರು ಬೇಕಾದರೂ ಸೃಷ್ಟಿಸಬಹುದು ಅದು ವ್ಯಕ್ತಿತ್ವಕ್ಕೆ ಯಾವ ರೀತಿ ಕೊಡುಗೆ ನೀಡಬಲ್ಲದು ಎಂಬುದು ಮುಖ್ಯ. ಸಮಾಜದಲ್ಲಿ ಸ್ಪಷ್ಟತೆ ಮನ್ನಣೆ ಸಿಗುವಂತಾಗುವ ಸಾಹಿತ್ಯ ಮುಖ್ಯ ಎಂದ ಅವರು, ಸಾಹಿತ್ಯ ಮಾನವೀಯ ಮೌಲ್ಯಗಳಾಗಬೇಕು, ಕನ್ನಡ ಭಾಷೆ ಬೆಳೆಯಬೇಕು ಅದೇ ರೀತಿ ಭಾಷೆಗಳನ್ನು ಪ್ರೀತಿಸಿ ಪ್ರಪಂಚವನ್ನು ವಿಸ್ತರಿಸುವ ರೀತಿಯಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಸಾಹಿತ್ಯ ಮನುಷ್ಯನಿಗೆ ಸಂಸ್ಕಾರ ಕಲಿಸುತ್ತದೆ. ಇದರಿಂದ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಅರಿಯಬೇಕು. ಭಾಷೆ, ಸಾಹಿತ್ಯದ ಮೂಲಕ ಸಮಾಜದ ಸಾಮರಸ್ಯ ಮೂಡಿಸಲು ಇದು ಸಹಕಾರಿಯಾಗಬಲ್ಲದು ಎಂದು ಹೇಳಿದರು.
ವಿಂಗಡಣೆ ಸಲ್ಲದು: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಭಾಷೆ- ಪ್ರಾಂತ್ಯ, ಜಾತಿ ಹೆಸರಿನಲ್ಲಿ ವಿಂಗಡಣೆ ಸಲ್ಲದು. ಮನುಷ್ಯ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವಿದ್ದು ಯಾವುದೇ ಕ್ಷೇತ್ರದಲ್ಲಿ ರಾಜಕೀಯದಿಂದ ದೂರವಿದ್ದು ಕೆಲಸ ಮಾಡಿದಾಗ ಸಫಲತೆಯನ್ನು ಕಾಣಲು ಸಾಧ್ಯ. ವೈಚಾರಿಕ ನೆಲಗಟ್ಟಿನ ಹಾದಿಯಲ್ಲಿ ಸ್ವಾರ್ಥ ಬರಬಾರದು. ಸರ್ಕಾರ ಯೋಜನೆಗಳನ್ನು ರೂಪಿಸಿದರೆ ಸಾಲದು, ಅದು ಜಾರಿಯಾಗಿ ಜನಸಾಮಾನ್ಯರಿಗೆ ದೊರಕುವಂತೆ ಮಾಡುವ ಕೆಲಸವು ಸರ್ಕಾರ ಮಾಡಬೇಕು, ಭಾಷೆ- ದೇಶ ಬಗ್ಗೆ ಅಭಿಮಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಜಿಪಂ ಸದಸ್ಯೆ ಸವಿತಾ ರಮೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ್, ಕೃಷ್ಣೇಗೌಡ, ಮಹೇಶ್, ಗಂಗಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಜಯಶೀಲ ಚಿದಾಂಬರ್, ನಾಗರಾಜ್ ಹಾಗೂ ಡಾ.ಬಿ.ಎಂ. ಪುಟ್ಟಯ್ಯ ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನ ಕನ್ನಡ ಸಮ್ಮೇಳನವಾಗಲಿ: ನಾಗಪ್ಪಗೌಡ
ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಬರಿ ಸಾಹಿತ್ಯ ದೃಷ್ಟಿಯಿಂದ ನೋಡುವುದಕ್ಕಿಂತಲೂ ಕನ್ನಡ ಭಾಷೆಯ ನೆಲೆಯಲ್ಲಿ ಒತ್ತು ನೀಡಬೇಕಿದೆ. ಭಾಷೆ ಗಟ್ಟಿಯಾದರೆ ಸಾಹಿತ್ಯವೂ ಸತ್ವಶೀಲಗೊಳ್ಳುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಮ್ಮೇಳನಗಳೆಂದು ಕರೆದರೆ ಅರ್ಥಪೂರ್ಣವಾಗಲಿದೆ ಎಂದು ಚಿಕ್ಕಮಗಳೂರು ತಾಲೂಕು ನಾಲ್ಕನೇ ಕನ್ನಡ ಸಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನಾಗಪ್ಪಗೌಡ ಅವರು ಹೇಳಿದ್ದಾರೆ.
ಆಲ್ದೂರಿನಲ್ಲಿ ಶನಿವಾರ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದರು. ಇತ್ತೀಚಿನ ಕೆಲವು ವರ್ಷಗಳಿಂದ ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆಗಳೆಂದು ಹಲವರು ಕರೆಯುತ್ತಿದ್ದಾರೆ. ಅಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಅರ್ಥಪೂರ್ಣ ಚರ್ಚೆ ನಡೆಯುತ್ತಿಲ್ಲ ಎಂಬುದು ಇದಕ್ಕೆ ಕಾರಣ. ಹೀಗಾಗಿ ಇದುವರೆಗೆ ಸಾಹಿತ್ಯಕ್ಕೆ ಪ್ರಾಧಾನ್ಯತೆ ಕೊಡುತ್ತಾ ಬಂದಿರುವ ನಾವು ಇನ್ನು ಮುಂದೆ ಕನ್ನಡಕ್ಕೆ ಆದ್ಯತೆ ನೀಡಬೇಕಾಗಿದೆ. ಕನ್ನಡವನ್ನು ಗಟ್ಟಿಗೊಳಿಸಿ ಬೆಳೆಸುವ, ತನ್ಮೂಲಕ ನಾಡಿನ ಸಮಷ್ಠಿ ಜೀವನವನ್ನು ಸರಿಯಾಗಿ ಕಟ್ಟುವ ಕೆಲಸ ಆಗಬೇಕಿದೆ ಎಂದರು.
ಜಗತ್ತಿನಲ್ಲಿ ಅದೆಷ್ಟೋ ಭಾಷೆಗಳು ನಶಿಸಿ ಹೋಗುತ್ತಿದೆ, ಭಾಷೆಯ ನಾಶವು ಒಂದು ಸಂಸ್ಕೃತಿಯ ನಾಶವಾಗಿದೆ. ವಾಸ್ತವದಲ್ಲಿ ಕನ್ನಡವನ್ನು ಇಂದು ನಿಧಾನವಾಗಿ ಮರೆಗೆ ಸರಿಸಲಾಗುತ್ತಿದೆ. ಈಗಿನ ಜಾಗತೀಕರಣ ಪರಿಸ್ಥಿತಿಯು ಆಂಗ್ಲ ಭಾಷೆಯ ಪರವಾಗಿದೆ. ಒಂದೆಡೆ ರೈತರ ಆತ್ಮಹತ್ಯೆ, ಇನ್ನೊಂದೆಡೆ ಸಾಂಸ್ಕೃತಿಕ ಆತ್ಮಹತ್ಯೆ ವಿಷಾಧಕರ ಸಂಗತಿ ಎಂದರು.