ಮತದಾರರಿಗೆ ಅವಮಾನ
ಚಿಕ್ಕಮಗಳೂರು: ರಾಜ್ಯ ಆಳುವವರು ಮಕ್ಕಳ ಆಟದಂತೆ ರಾಜಿನಾಮೆ ಪತ್ರ ಹಿಡಿದು ಬೇರೆ ಪಕ್ಷಕ್ಕೆ ಹಾರಲು ಸಿದ್ಧರಾಗಿದ್ದಾರೆ. ಈ ಮೂಲಕ ಮತದಾರರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಹೇಳಿದ್ದಾರೆ.
ನಗರದ ಸಂತೆ ಮೈದಾನದಲ್ಲಿ ಶನಿವಾರ ಸಿಪಿಐ ಏರ್ಪಡಿಸಿದ್ದ ರಾಜಕೀಯ ಸಮಾವೇಶವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಜನರ ಸಮಸ್ಯೆ ಕೇಳುವವರಿಲ್ಲವಾಗಿದೆ. ಇಷ್ಟು ನಿಕೃಷ್ಟವಾದ ರಾಜಕೀಯ ಸನ್ನಿವೇಶ ಸೃಷ್ಟಿಯಾಗಿರುವುದನ್ನು ಹಿಂದೆಂದೂ ಕಂಡಿರಲಿಲ್ಲ ಎಂದರು.
ವಿಫಲವಾಗಿದೆ: ಪ್ರಬಲ ದೇಶ ಭಕ್ತಿಯ ಹೆಸರಿನಲ್ಲಿ ಜನರನ್ನು ನಂಬಿಸಿ ಕೋಮುವಾದದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ, ಅಧಿಕಾರದ ಆಸೆಗೆ ಬಿದ್ದು, ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿ ಒಡೆದು ಚೂರಾಗಿದೆ. ಹಿಂದಿನ ಯಾವುದೇ ಸರ್ಕಾರದಲ್ಲಿ ನಡೆಯದಷ್ಟು ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ಮಾತೃ ಭೂಮಿ ಹೆಸರಿನಲ್ಲಿ ರಾಜ್ಯದ ಭೂ ಸಂಪತ್ತನ್ನು ಕೊಳ್ಳೆ ಹೊಡೆದು, ಶಾಸಕರು, ಮಂತ್ರಿಗಳು ಜೈಲು ಪಾಲಾಗಿದ್ದಾರೆ ಎಂದ ಅವರು, ಮಾಡಿದ ಭ್ರಷ್ಟಾಚಾರದ ಫಲವಾಗಿ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತಂದಿಟ್ಟುಕೊಂಡಿದ್ದಾರೆ. ಇಂತಹ ಕೋಮುವಾದಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದು ಎಂಬ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ಹೇಳಿದರು.
ಬೆಲೆ ಏರಿಕೆ; ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಬೆಲೆ ಏರಿಕೆ, ಖಾಸಗೀಕರಣ ನೀತಿಯನ್ನು ತಡೆಯುವಲ್ಲಿ ವಿಫಲವಾಗಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ಹಗರಣಗಳು ಬಯಲಿಗೆ ಬರುತ್ತಿವೆ. ಆದರೆ, ಪ್ರಧಾನಮಂತ್ರಿಯವರು ಈ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಈವರೆಗೂ ಜನರ ಸಮಸ್ಯೆಯನ್ನಿಟ್ಟುಕೊಂಡು ಯಾವುದೇ ಹೊರಾಟ ನಡೆಸಿಲ್ಲ ಎಂದು ಆರೋಪಿಸಿದರು.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಡಿ. ರಾಜಾ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಜನ ಸಾಮಾನ್ಯರ ಬಗ್ಗೆ ಕಾಳಜಿ ಹೊಂದಿಲ್ಲ. ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ ಜನವಿರೋಧಿ ಆಡಳಿತ ನಡೆಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎಫ್‌ಡಿಐ ನೀತಿಯಿಂದ ಜನಸಾಮಾನ್ಯರು ಬೀದಿಗೆ ಬರಲಿದ್ದಾರೆ. ಪ್ರಧಾನಮಂತ್ರಿಗಳು ವಿದೇಶಿ ಕಂಪನಿಗಳ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ, ಕಾರ್ಮಿಕರ ಸಮಸ್ಯೆಗಳು ಬಗೆಹರೆಯಬೇಕಾದರೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಎಡಪಕ್ಷಗಳು ಅಧಿಕಾರಕ್ಕೆ ಬರಬೇಕು ಎಂದರು. ರಾಜ್ಯ ಸಹ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿದರು.
ಎಸ್.ಎಲ್. ರಾಧ ಸುಂದರೇಶ್ ಮಾತನಾಡಿ, ದುಡಿಮೆಯನ್ನು ನಂಬಿ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಿಪಿಐ ಕಲಿಸಿಕೊಟ್ಟಿದೆ. ಮೂಡನಂಬಿಕೆಯಿಂದ ಹೊರಬಂದು ಸೈದ್ಧಾಂತಿಕ ನಿಲುವು ಹೊಂದಿರುವ ಸಿಪಿಐ ಹೋರಾಟವನ್ನು ಜನತೆ ಬೆಂಬಲಿಸಬೇಕು ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕೆ. ಗುಣಶೇಖರ್, ಜಿ. ರಘು, ಎಐಕೆಎಸ್ ಜಿಲ್ಲಾಧ್ಯಕ್ಷ ಎನ್.ಆರ್. ಮಂಜುನಾಥ್, ಎಐಟಿಯುಸಿ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಎಸ್. ವಿಜಯಕುಮಾರ್, ಬಿ. ಅಮ್ಜದ್, ಬಿ.ಕೆ. ಲಕ್ಷ್ಮಣ್, ಜಾರ್ಜ್ ಆಸ್ಟೀನ್, ಗೋಪಾಲ್ ಎನ್. ಶೆಟ್ಟಿ, ಕೆರೆಮಕ್ಕಿ ರಮೇಶ್, ಕೆಳವಳ್ಳಿ ಕಳಸಪ್ಪ, ಹೆಡದಾಳ್ ಕುಮಾರ್, ವಿಜಯ ಕುಮಾರಿ ಇದ್ದರು.