ಭದ್ರಾ ಅಭಯಾರಣ್ಯ: ಬೆಂಕಿ ರೇಖೆ ನಿರ್ಮಿಸಲು ಆಗ್ರಹ
ಚಿಕ್ಕಮಗಳೂರು: ಜಿಲ್ಲೆಯ ಪ್ರಾದೇಶಿಕ ಅರಣ್ಯ ಹಾಗೂ ಭದ್ರಾ ಅಭಯಾರಣ್ಯದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಅವಧಿಗೆ ಮುನ್ನವೇ ಬೇಸಿಗೆಯ ತೀವ್ರತೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಅಭಯಾರಣ್ಯದ ಕೆಲವು ಭಾಗ ಸೇರಿದಂತೆ ಬಾಬಾಬುಡನ್ಗಿರಿ ಬೆಟ್ಟ ಶ್ರೇಣಿಯಲ್ಲಿ ಕಾಡು ಹಾಗೂ ಹುಲ್ಲುಗಾವಲಿನಲ್ಲಿ ಬೆಂಕಿ ಪ್ರಕರಣಗಳು ತೀವ್ರವಾಗುತ್ತಿದೆ ಎಂದು ಭದ್ರಾ ವೈಲ್ಡ್ ಲೈಫ್ಲ್ ಕನ್ನೆಷ್ಶನ್ ಟ್ರಸ್ಟ್ನ ಡಿ.ವಿ. ಗಿರೀಶ್, ವೈಲ್ ಕ್ಯಾಟ್- ಸಿ ಶ್ರೀದೇವ್ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ. ಗಿರಿಜಾಶಂಕರ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕಾರ್ಯಾರಂಭ ಮಾಡಬೇಕಿತ್ತು: ಪ್ರಾದೇಶಿಕ ಅರಣ್ಯ ಇಲಾಖೆ ಸೇರಿದಂತೆ ಭದ್ರಾ ವನ್ಯಜೀವಿ ವಿಭಾಗ ಹಿಂದಿನ ವರ್ಷಗಳಂತೆ ಬೆಂಕಿ ರೇಖೆ ನಿರ್ಮಿಸುವಲ್ಲಿ ಫೆಬ್ರವರಿ ತಿಂಗಳು ಬರಲೆಂದು ಕಾಯುತ್ತಿರುವುದು ಕಾಡು ಹಾಗೂ ಸುತ್ತಲ ಹುಲ್ಲು ಗಾವಲಿನಲ್ಲಿ ಬೆಂಕಿ ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಂದಾಕ್ಷಣವೇ ಡಿಸೆಂಬರ್ ತಿಂಗಳಲ್ಲೆ ಅರಣ್ಯದಲ್ಲಿ ಬೆಂಕಿ ತಡೆಯಲು ಬೆಂಕಿ ಲೈನ್ ನಿರ್ಮಾಣ ಮಾಡಲು ಸ್ಥಳಿಯರನ್ನು ಬೆಂಕಿ ವೀಕ್ಷಕರಾಗಿ ನೇಮಿಸಿಕೊಂಡು ಕಾರ್ಯಾರಂಭ ಮಾಡಬೇಕಾಗಿತ್ತು.
ಅಲ್ಲಲ್ಲಿ ಬೆಂಕಿ: ಆದರೆ, ಇಲಾಖೆಗಳ ಮುಂದಾಲೋಚನೆ ಕೊರತೆಯಿಂದ ಈ ವರ್ಷ ಡಿಸೆಂಬರ್ ತಿಂಗಳ ಅಂತ್ಯದಲ್ಲೆ ಬೆಟ್ಟಪ್ರದೇಶದ ಹುಲ್ಲುಗಾವಲು ಮತ್ತು ಶೋಲಾ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಆರಂಭವಾಗಿದೆ. ತೀವ್ರ ಚಳಿಯೂ ಇಲ್ಲದೆ. ಬಿಸಲಿನ ತಾಪದಿಂದ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇಲಾಖೆಗಳ ಕಾರ್ಯವೈಖರಿ ನೋಡಿದರೆ ಅರಣ್ಯ ಇಲಾಖೆ ಬೆಂಕಿ ನಿಯಂತ್ರಣಗಳ ಯಾವುದೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲವೆಂದು ಹೇಳಬೇಕಾಗಿದೆ. ಬೆಂಕಿ ನಿಯಂತ್ರಣಕ್ಕೆ ಅಗತ್ಯವಾದಷ್ಟು ಬೆಂಕಿ ವೀಕ್ಷಕರನ್ನು ಇನ್ನೂ ಸಹ ನೇಮಿಸಿಕೊಂಡಿಲ್ಲ. ಬಿಸಿಲ ತಾಪಮಾನ ತೀವ್ರವಾಗುತ್ತಿದ್ದಂತೆ ಬೆಟ್ಟ ಪ್ರದೇಶದ ಒಣಗಿದ ಹುಲ್ಲುಗಳಿಗೆ ಒಂದು ಕಿಡಿ ಬೆಂಕಿ ತಗುಲಿದರೂ ಶೋಲಾ ಕಾಡುಗಳು ಬೆಂಕಿಗೆ ಆಹುತಿಯಾಗುತ್ತವೆ ಎಂದು ಹೇಳಿದ್ದಾರೆ.
ಗಾಢ ನಿರ್ಲಕ್ಷ್ಯ: ಈ ಅಪಾಯವನ್ನು ಅರಣ್ಯ ಇಲಾಖೆ ಅರ್ಥ ಮಾಡಿಕೊಂಡಿಲ್ಲವೋ ಅಥವಾ ಬೆಂಕಿ ಬಿದ್ದರೆ ನಂತರದ ದಿನಗಳಲ್ಲಿ ಆರಿಸುವ ಹೊಣೆಗಾರಿಕೆಯೇ ಇರುವುದಿಲ್ಲವೆಂಬ ಗಾಢ ನಿರ್ಲಕ್ಷ್ಯವನ್ನು ತಾಳಿದಂತಿದೆಯೋ ಅರ್ಥವಾಗುತ್ತಿಲ್ಲ. ಅಮೂಲ್ಯವಾದ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ಆಗರವಾದ ಶೋಲಾ ಕಾಡು ಮತ್ತು ಪ್ರಾಣಿಗಳ ರಕ್ಷಿತಾರಣ್ಯವಾದ ಭದ್ರಾ ಅಭಯಾರಣ್ಯಕ್ಕೆ ಬೆಂಕಿ ತಗುಲಿದರೆ ಆಗುವ ನಷ್ಟವನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಮತ್ತು ಭದ್ರಾ ವನ್ಯಜೀವಿ ವಿಭಾಗ ತಕ್ಷಣ ಅರಣ್ಯ ಬೆಂಕಿ ತಡೆಯಲು ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಎಚ್ಚರಿಕೆ ಅಗತ್ಯ: ಬೆಂಕಿ ಬಿದ್ದಾಕ್ಷಣ ಮಾಹಿತಿ ನೀಡುವ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಳ್ಳಬೇಕು. ಇಲಾಖಾ ಸಿಬ್ಬಂದಿಗಳು ದಿನದ 24 ಗಂಟೆ ಅತಿ ಎಚ್ಚರದಿಂದ ಇಲ್ಲದಿದ್ದರೆ ಈ ವರ್ಷ ಹೆಚ್ಚಿನ ಅರಣ್ಯ ಪ್ರದೇಶ ಬೆಂಕಿಯಿಂದ ಕರಕಲಾಗುತ್ತದೆ.
ಶುಕ್ರವಾರ ಭದ್ರಾ ಅಭಯಾರಣ್ಯದ ಹೆಬ್ಬೆ ವಲಯದ ಗಂಗೆಗಿರಿ, ಸಿದ್ದಗಿರಿ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲಾಖಾ ಸಿಬ್ಬಂದಿ ಫಯರ್ ಲೈನ್ ಮಾಡುವ ಭರದಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ. ಸಿಬ್ಬಂದಿಗಳ ಅಚಾತುರ್ಯದಿಂದ ಗಂಗೆಗಿರಿ ಗುಡ್ಡದಲ್ಲಿ ರಾತ್ರಿಯೆಲ್ಲಾ ಬೆಂಕಿ ಆವರಿಸಿತ್ತು. ಇಲ್ಲಿ ಸಿಬ್ಬಂದಿಗಳ ಮತ್ತು ಮೇಲಾಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಅಮೂಲ್ಯ ಹುಲ್ಲುಗಾವಲು ಪ್ರದೇಶ ಸುಟ್ಟು ಭಸ್ಮವಾಗಿದೆ.
ತಣಿಗೆಬೈಲು ವಲಯದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲೂ ಕೂಡ ಫಯರ್ ಲೈನ್ ಹೆಸರಿನಲ್ಲಿ ಒಣಗಿದ ಗುಡ್ಡವನ್ನು ಬೆಂಕಿ ಹಾಕಿ ಸುಡಲಾಗುತ್ತಿದೆ. ಈ ಬಗ್ಗೆ ಇಲಾಖಾ ಸಿಬ್ಬಂದಿಗಳು ಎಚ್ಚರವಹಿಸಿ ಬೆಟ್ಟಗಾಡುಗಳಲ್ಲಿನ ಹುಲ್ಲು ಪ್ರದೇಶಕ್ಕೆ ಬೆಂಕಿ ತಗುಲದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.