ಸಮಾಜ ಸುಧಾರಣೆಯಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು
ಚಿಕ್ಕಮಗಳೂರು: ಸಮಾಜದ ಸರಿ ದಾರಿಯಲ್ಲಿ ನಡೆಯಬೇಕಾದರೆ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ಕುಮಾರ್ ಹೇಳಿದ್ದಾರೆ.
ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಬೆಳ್ಳಿ ಮಂಡಳ ಹಾಗೂ ವಾರ್ತಾ ಇಲಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಭೂತಯ್ಯನ ಮಗ ಅಯ್ಯು ಚಲನಚಿತ್ರ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಎಲ್ಲ ಮಾಧ್ಯಮಗಳಿಗಿಂತಲೂ ಚಲನಚಿತ್ರ ಮಾಧ್ಯಮ ಪರಿಣಾಮಕಾರಿಯಾಗಿದ್ದು ಸಮಾಜದ ಸರಿತಪ್ಪುಗಳನ್ನು ತಿದ್ದುವಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮವಾಗಿದೆ ಎಂದರು.
ಬೆಳ್ಳಿ ಮಂಡಲದ ಅಧ್ಯಕ್ಷ ಬಿ.ಎಸ್. ಜ್ವಾಲನಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸೃಜನಾತ್ಮಕ ಚಲನಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆಯಿಂದ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ ಎಂದರು.
ವಾರ್ತಾ ಇಲಾಖೆಯ ನಾಗರಾಜ್ ಮಾತನಾಡಿ, ಮಾಧ್ಯಮಗಳು ಜನತೆಯ ಮನೋವಿಕಾಸಕ್ಕೆ ಸಹಕಾರಿಯಾಗುವಂತ ಶಕ್ತಿಯನ್ನು ಹೊಂದಿರುವುದರಿಂದ ಮಾಧ್ಯಮಗಳು ಸಮಾಜವನ್ನು ತಿದ್ದುವಂತಹ ಜವಬ್ದಾರಿಯನ್ನು ಹೊಂದಿದೆ. ಚಲನಚಿತ್ರಗಳು ಉತ್ತಮ ಸಾಹಿತ್ಯ ಹೊಂದಿರುವ ಚಿತ್ರಗಳನ್ನು ನಿರ್ಮಿಸುವಂತಹ ಅವಶ್ಯಕತೆ ಇದೆ. ಚಲನಚಿತ್ರ ಮಾಧ್ಯಮಗಳಲ್ಲಿ ಬರುವ ಒಳ್ಳೆಯ ವಿಷಯಗಳನ್ನು ಮಾತ್ರ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮಾಧ್ಯಮಗಳಲ್ಲಿ ಬರುವ ಹಲವಾರು ವಿಷಯಗಳ ಯುವ ಜನತೆ ಸರಿದಾರಿಯಲ್ಲಿ ನಡೆಯುವಂತೆ ಮಾಧ್ಯಮಗಳು ನೆರವಾಗಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ ಭಗವಂತಪ್ಪ ಅಧ್ಯಕ್ಷತೆ ವಹಿಸಿದ್ದರು.