'ಗ್ರಾಮೀಣರಲ್ಲಿ ಅರಿವು ಮೂಡಿಸಿ'
ನರಸಿಂಹರಾಜಪುರ: ಎನ್ಎಸ್ಎಸ್ ಶಿಬಿರದಲ್ಲಿ ಗ್ರಾಮೀಣ ಜನರಿಗೆ ಆರೋಗ್ಯ, ಶಿಕ್ಷಣದ ಮಹತ್ವದ ಬಗ್ಗೆ ಶಿಬಿರಾರ್ಥಿಗಳು ಅರಿವು ಮೂಡಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ಪಿ. ಸಂಪತ್ ಕುಮಾರ್ ಹೇಳಿದರು.
ಶೆಟ್ಟಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಯಾವುದೇ ಕಷ್ಟ ಬಂದರೂ ಎದರಿಸುವ ಶಕ್ತಿಯನ್ನು ರೂಡಿಸಿಕೊಳ್ಳಬೇಕು. ಜೀವನದುದ್ದಕ್ಕೂ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದರು.
ಶಿಬಿರಾಧಿಕಾರಿ ಕೆ. ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಸಂಸ್ಕೃತಿ, ಸಮಸ್ಯೆ, ಆಚಾರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಕೊಂಡಿರಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಗ್ರಾಮೀಣ ಭಾಗದಲ್ಲೇ ಎನ್ಎಸ್ಎಸ್ ಶಿಬಿರ ನಡೆಸಲಾಗುತ್ತಿದೆ ಎಂದರು.
ಕೆ.ಡಿ. ಕೃಷ್ಣಪ್ಪ ಉಪನ್ಯಾಸ ನೀಡಿ, ಭೂಮಿಯನ್ನು ಸರಿಪಡಿಸಲು ಸಾವಯವ ಕೃಷಿಗೆ ರೈತರು ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಜಾನಕೀರಾಮ್ ಅಧ್ಯಕ್ಷತೆ ವಹಿಸಿದ್ದರು.