ದೇಸೀ ಕಲೆಗಳ ಅನುಕರಣ
ಚಿಕ್ಕಮಗಳೂರು: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಮ್ಮ ದೇಶೀ ಕಲೆಗಳನ್ನು ಅನುಕರಣೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲಾಗುತ್ತಿದೆ ಎಂದು ಭಾರತೀಯ ವಕೀಲರ ಸಂಘದ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದರು.
ನಗರದ ಕಲಾಮಂದಿರದಲ್ಲಿ ಕೆಪಿಎಂಸಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ನೂಪುರ ಅಕಾಡೆಮಿ ಆಫ್ ಪರ್ ಫಾರ್ಮಿಂಗ್ ಆರ್ಟ್ಸ್ ಪ್ರಸ್ತುತ ಪಡಿಸಿದ ತ್ಯಾಗರಾಜ ರಾಮಾಯಾಣ ನೃತ್ಯರೂಪಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೈವಿಧ್ಯಮಯ ದೇಶ: ನಾನಾ ಕಲೆ ಅಡಗಿಸಿಕೊಂಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಭಾರತ ಒಂದು ವೈವಿಧ್ಯಮಯ ದೇಶ. ಕುಗ್ರಾಮದಲ್ಲಿ ಅರಳಿರುವ ಪ್ರತಿಭೆ ಜಿಲ್ಲೆಯ ಮಕ್ಕಳಿಗೆ ಕಲೆಯನ್ನು ಧಾರೆಯೆರೆಯುತ್ತಿರುವ ಜ್ಯೋತಿ ಪ್ರಕಾಶ್ ಅವರಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ತಂದೆ, ತಾಯಿಯ ಆಶೀರ್ವಾದವಿದ್ದರೆ ಜಗತ್ತು ಗೆಲ್ಲಬಹುದು. ತ್ಯಾಗರಾಜರ ಪೌರಾಣಿಕ ನೃತ್ಯ ರೂಪಕದ ಮೂಲಕ ಜನಮನ ಗೆದ್ದಿದ್ದೀರ ಎಂದರು.
ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಪಿಡುಗು ಸೇರಿದಂತೆ ಸಾಮಾಜಿಕ ಕುಂದು ಕೊರತೆ ಬಗ್ಗೆ ಪ್ರಜ್ಞೆ ಮೂಡಿಸುವ ಕಾರ್ಯಗಳನ್ನು ಇಂತಹ ಕಲೆಗಳ ಮೂಲಕ ಪ್ರತಿಬಿಂಬಿಸಿದರೆ ಸಮಾಜಕ್ಕೆ ಅಂಟಿರುವ ಕಳಂಕ ದೂರ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮನಶ್ಶಾಂತಿ ಅಗತ್ಯ: ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಒತ್ತಡದ ಜಂಜಾಟದಿಂದ ಬಳಲಿ ಬೆಂಡಾದ ಮನಸ್ಸಿಗೆ ಶಾಂತಿ ಸಮಾಧಾನ ದೊರಕಲು ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿ. ಶರೀರದ ಸೆಖೆ ಹೋಗಲಾಡಿಸಲು ಫ್ಯಾನ್ ಮತ್ತು ಎ.ಸಿ. ಅಳವಡಿಕೆಯಿಂದ ಸಾಧ್ಯ. ಆದರೆ, ದೇಹದ ಒಳಗಿರುವ ಬಿಸಿ ಆತ್ಮ ತೃಪ್ತಿಗೊಳಿಸಲು ನೃತ್ಯ, ಸಂಗೀತ ಕಲೆಗಳಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಕೆಪಿಎಂಸಿ ಟ್ರಸ್ಟ್ ಅಧ್ಯಕ್ಷ ಎಂ.ಸಿ. ಪ್ರಕಾಶ್, ನೃತ್ಯ ರೂಪಕ ನಿರ್ದೇಶಕಿ ಜ್ಯೋತಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಂ.ಎಸ್. ಚಂದ್ರಪ್ಪ, ಪ್ರೇಮಾ ಕೋದಂಡರಾಮ ಶೆಟ್ಟಿ, ಬಿ.ನಿ. ವಿಶ್ವನಾಥ್ ಮೊದಲಾದವರು ಇದ್ದರು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಂದ್ರಯ್ಯ ವಂದಿಸಿದರು.