ಸೇವಾಲಾಲ್‌ಜ್ಯೋತಿ ಯಾತ್ರೆ ಆಗಮನ
ಕಡೂರು: ಪಟ್ಟಣಕ್ಕೆ ಆಗಮಿಸಿದ ಸೇವಾಲಾಲ್‌ಜ್ಯೋತಿ ಯಾತ್ರೆಯನ್ನು ತಾಲೂಕಿನ ಬಂಜಾರ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರು ಆದರಿಂದ ಬರಮಾಡಿಕೊಂಡು ಜ್ಯೋತಿಯೊಂದಿಗೆ ಆಗಮಿಸಿದ ಚಿತ್ರದುರ್ಗ ಸೀಬಾರದ ಬಂಜಾರ ಗುರು ಪೀಠಾಧ್ಯಕ್ಷ ಸೇವಾಲಾಲ್ ಸರ್ದಾರ್ ಸ್ವಾಮೀಜಿಯವರನ್ನು ಸ್ವಾಗತಿಸಿದರು.
ಜಯಘೋಷಗಳೊಂದಿಗೆ ಶ್ರೀಗಳನ್ನು ಬಸವೇಶ್ವರ ವೃತ್ತದಿಂದ ಮರವಂಜಿ ವೃತ್ತದ ತನಕ ಮೆರವಣಿಗೆಯಲ್ಲಿ ಕರೆತರಲಾಯಿತು. ಕೆಎಲ್‌ವಿ ವೃತ್ತದಲ್ಲಿ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಜ್ಯೋತಿಯಾತ್ರೆ ಕುರಿತು ಮಾತನಾಡಿ, ಬಂಜಾರ ಸಮುದಾಯದ ಅನಿಷ್ಟ ಪದ್ದತಿಗಳನ್ನು ತೊಲಗಿಸಲು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಿಂದ ಆರಂಭಗೊಂಡು, ದಾವಣಗೆರೆ ಜಿಲ್ಲೆಯ ಹೂನ್ನಾಳಿ ತಾಲೂಕು ಸೂರಗೊಂಡನಕೊಪ್ಪಕ್ಕೆ ಸೇರಲಿದೆ. ಬಂಜಾರ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜ್ಯೋತಿಯಾತ್ರೆ ನಡೆಯುತ್ತಿದೆ. ವಿಶ್ವ ಶಾಂತಿಗಾಗಿ ಭೋಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಂಜಾರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದರು.
ಮಾಜಿ ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜನಾಯ್ಕ ಹಾಗೂ ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕ ಮಾತನಾಡಿ, ಬಂಜಾರ ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಕೆಟ್ಟ ಪದ್ದತಿಗಳನ್ನು ದೂರಮಾಡಿ ಸಮಾಜವನ್ನು ಜಾಗೃತಗೊಳಿಸಿ ಉತ್ತಮ ಮಾರ್ಗದೆಡೆಗೆ ಕರೆದೊಯ್ಯಲು ಗುರುಗಳು ಕೈಗೊಂಡಿರುವ ಕಾರ್ಯಕ್ಕೆ ಸಮಾಜದ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕ, ಜಿಪಂ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜನಾಯ್ಕ, ತಾಲೂಕು ಬಂಜಾರ ಸಮಿತಿ ಅಧ್ಯಕ್ಷ ಸತೀಶನಾಯ್ಕ,ಬಿ.ಟಿ. ಗಂಗಾಧರನಾಯ್ಕ, ಎಚ್. ಉಮೇಶ್, ಕಾಮನಕೆರೆ ಶಶಿಧರ್, ಗಿರೀಶ್, ಓಂಕಾರಮೂರ್ತಿ, ಎಸ್.ಜಿ. ಕೊಪ್ಪಲು ಗಂಗಾಧರ್ ಮಾತನಾಡಿದರು. ಬಂಜಾರ ಸಮಾಜದ ರಮೇಶನಾಯ್ಕ, ಕೃಷ್ಣಾನಾಯ್ಕ, ಪ್ರವೀಣನಾಯ್ಕ, ಧನಪಾಲನಾಯ್ಕ, ಗೋಪಾಲ್, ಸೋಮಶೇಖರ್, ವೆಂಕಟೇಶನಾಯ್ಕ, ಹನುಮಂತನಾಯ್ಕ, ಕಾಂತರಾಜು ಇದ್ದರು.