ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಚಿಕ್ಕಮಗಳೂರು: ರಾಜ್ಯದಲ್ಲಿ ಬರಗಾಲ ಬಂದಿದ್ದು, ಹಲವೆಡೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿರುವುದು ಮಾತ್ರವಲ್ಲದೆ ಜಾನುವಾರುಗಳು ಮೇವಿನ ಕೊರತೆ ಎದುರಿಸುತ್ತಿವೆ. ಈ ಸಮಸ್ಯೆ ಎದುರಿಸಲು ಮುಂದಿನ ಮುಂಗಾರು ಮಳೆಯವರೆಗೆ ಕಾಯಬೇಕು. ಇದಕ್ಕೆ ಇನ್ನು 5 ತಿಂಗಳು ಇದೆ.
ಕುಡಿಯುವ ನೀರಿನ ಅಭಾವ ಈಗಾಗಲೇ ಹಲವೆಡೆ ಕಾಣಿಸಿಕೊಂಡಿದೆ. ಇನ್ನು ಬಹಳಷ್ಟು ಗ್ರಾಮಗಳು ಇದರ ಹೊಸ್ತಿಲಲ್ಲಿ ಇವೆ. ಕಷ್ಟದ ದಿನ ದೂರವಾಗಬೇಕಾದರೆ ಸರ್ಕಾರದ ಸಹಾಯಹಸ್ತದ ಅವಶ್ಯಕತೆ ಇದೆ.
ಈಗಾಗಲೇ ಬರಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು ಜೂನ್ ತಿಂಗಳವರೆಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿಗೆ ಅಗತ್ಯವಿರುವ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದರನ್ವಯ ಮುಖ್ಯಮಂತ್ರಿಯವರು ಕಳೆದ ಜನವರಿ 17 ರಂದು ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ನಡೆಸಿ ತೆಗೆದುಕೊಂಡ ತೀರ್ಮಾನದ ಪ್ರಕಾರ ರಾಜ್ಯದ 28 ಜಿಲ್ಲೆಗಳ 157 ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಲಿದೆ.
ಈ ಬರ ಪರಿಸ್ಥಿತಿ ನಿಭಾಯಿಸಲು ಕುಡಿಯುವ ನೀರು ಮತ್ತು ಜಾನುವಾರು ಸಂರಕ್ಷಣೆಗೆ ಪ್ರತಿ ತಾಲೂಕಿಗೆ ತಲಾ ರು. 30 ಲಕ್ಷದಂತೆ ಒಟ್ಟು ರು. 47.10 ಕೋಟಿಯನ್ನು ಜನವರಿ 30 ರಂದು (ಸರ್ಕಾರದ ಆದೇಶದ ಸಂಖ್ಯೆ ಕಂಇ 24 ಟಿಎನ್ಆರ್ 2013)ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಟ್ಯಾಂಕರ್ನಲ್ಲಿ ನೀರು: ಬಿಡುಗಡೆ ಮಾಡಿರುವ ಹಣವನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಅಂದರೆ ರಾಜ್ಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮಟ್ಟದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದಂತಾಗಿದೆ.
ಇದರ ಜತೆಗೆ ಗೋಶಾಲೆ, ಜಾನುವಾರುಗಳಿಗೆ ಮೇವು ಪೂರೈಕೆಗೆ ಮಾತ್ರ ವೆಚ್ಚ ಮಾಡಲು ತಿಳಿಸಲಾಗಿದೆ.
ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ತಿ ಕಾಮಗಾರಿಗಳನ್ನು ಎಸ್ಡಿಆರ್ಎಫ್ 7, ಎನ್ಡಿಆರ್ಎಫ್ ಅಡಿಯಲ್ಲಿ ಕೈಗೊಳ್ಳುವಂತಿಲ್ಲ ಹಾಗೂ ಕಾಮಗಾರಿ ಬಿಡುಗಡೆಯಾದ ಅನುದಾನಕ್ಕೆ ಮಾತ್ರ ಮಿತಿಗೊಳಿಸಬೇಕು. ಅಂದರೆ ಈಗ ಬಿಡುಗಡೆ ಮಾಡಿರುವ ಹಣವನ್ನು ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳ ಮೇವಿಗೆ ಮಾತ್ರ ಬಳಕೆ ಮಾಡಬೇಕು. ಇತರ ಉದ್ದೇಶಗಳಿಗೆ ಈ ಹಣವನ್ನು ಬಳಕೆ ಮಾಡುವಂತಿಲ್ಲ.
ಸರ್ಕಾರಕ್ಕೆ ಮನವರಿಕೆ: ನೀರಿನ ಅಭಾವದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆಯಾಗಿದೆ.
ಆದರೆ, ಮುಂದೆ ಎದುರಾಗಲಿರುವ ಕಷ್ಟದ ದಿನಗಳನ್ನು ದೂರ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇದೆ.
ಸರ್ಕಾರ ಅನುದಾನ ಬಿಡುಗಡೆಯಲ್ಲಿ ಜಿಪುಣತನ ಪ್ರದರ್ಶನ ಮಾಡುತ್ತಿದೆ. ಈಗ ಬಿಡುಗಡೆ ಮಾಡಿರುವ ಹಣದಲ್ಲಿ ಹಾಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಜ. 5 ರಂದು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳ ಮೇವಿಗಾಗಿ ರು. 14.39 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ರು. 6.81 ಕೋಟಿ ಬೇಕಾಗಿದೆ. ಈಗ ಪ್ರತಿ ತಾಲೂಕಿಗೆ ಕೇವಲ ರು. 30 ಲಕ್ಷ ಬಿಡುಗಡೆ ಮಾಡಿರುವುದು ಸಾಕಾಗುವುದಿಲ್ಲ. ಜನಪ್ರತಿನಿಧಿಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಅಧಿಸೂಚನೆ ಪ್ರಕಟಗೊಂಡರೆ ಅಧಿಕಾರಿಗಳು ಫುಲ್ ಬಿಜಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಿದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯವಾಗದೆ, ಬರ ಪೀಡಿತ ಪ್ರದೇಶಗಳು ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಿಸಬಹುದು. ಇದಕ್ಕೆ ತಕ್ಷಣವೇ ಅಗತ್ಯವಿರುವ ಹಣ ಬಿಡುಗಡೆ ಮಾತ್ರ ಪರಿಹಾರವಾಗಲಿದೆ.
-ಆರ್. ತಾರಾನಾಥ್