ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೆಸಾರ್ಟ್ ನಿರ್ಮಾಣಕ್ಕೆ ವಿರೋಧ

Parashurama
Updated On : 8 Feb 2013, 10:13 am

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ಶ್ರೇಣಿ ಸೇರಿದಂತೆ ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಭದ್ರಾ ಕನ್ಸರ್‌ವೇಷನ್ ಟ್ರಸ್ಟ್ ಮುಖ್ಯಸ್ಥ ಡಿ.ವಿ. ಗಿರೀಶ್, ವೈಲ್ಟ್‌ಕ್ಯಾಟ್- ಸಿ ಮುಖ್ಯಸ್ಥ ಶ್ರೀದೇವ್ ಹುಲೀಕೆರೆ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ. ಗಿರಿಜಾಶಂಕರ ಆಗ್ರಹಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿಗಳು ಸಭೆಯೊಂದನ್ನು ನಡೆಸಿ, ಅದರಲ್ಲಿ ಪರಿಸರಾಸಕ್ತ ಸಂಘಟನೆಗಳ ಮುಖ್ಯಸ್ಥರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳ ಜೊತೆ ಚರ್ಚಿಸಿ ಪರಿಸರ ಸೂಕ್ಷ್ಮತೆ ಹೊಂದಿರುವ ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಖಾಸಗಿ ಭೂಮಿಯಾದರೂ ರೆಸಾರ್ಟ್ ನಿರ್ಮಿಸಲು ಅನುಮತಿ ನೀಡಬಾರದೆಂದು ನಿರ್ಣಯ ಕೈಗೊಂಡಿದ್ದರು. ಆದರೆ, ಇತ್ತೀಚೆಗೆ ಆ ನಿರ್ಣಯಕ್ಕೆ ಯಾವುದೇ ರೀತಿ ಮಾನ್ಯತೆ ನೀಡದೆ ರೆಸಾರ್ಟ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆತಂಕದ ವಾತಾವರಣ: ಪ್ರಾದೇಶಿಕ ಅರಣ್ಯ ವಿಭಾಗ, ರೆಸಾರ್ಟ್ ನಿರ್ಮಾಣಕ್ಕೆ ತನ್ನ ಇಲಾಖೆಯಿಂದ ಯಾವುದೇ ರೀತಿಯ ಆಕ್ಷೇಪಣೆಯು ಇಲ್ಲವೆಂದು ಲಿಖಿತವಾಗಿ ಅನುಮತಿ ನೀಡುತ್ತಿದೆ. ಹೊಸದಾಗಿ ಬೆಟ್ಟ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಈ ರೀತಿ ಆದೇಶಗಳು ಪೂರಕವಾಗಿದ್ದು, ಬೆಟ್ಟ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಓಡಾಟಕ್ಕೆ ಇದ್ದ ನಿರಾತಂಕ ವಾತಾವರಣ ಆತಂಕದ ವಾತಾವರಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ.
ರೆಸಾರ್ಟ್‌ಗಳು ಆ ಪ್ರದೇಶದಲ್ಲಿ ಹರಿಯುವ ನೈಸರ್ಗಿಕ ನೀರಿನ ಮೂಲಗಳನ್ನೆ ಬರುವ ಪ್ರವಾಸಿಗರ ಅನುಕೂಲಕ್ಕೆ ಹಾಗೂ ಅವಶ್ಯಕತೆಗೆ ಬಳಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಕೆಳ ಹಂತದ ಗ್ರಾಮಗಳಿಗೆ ನೀರಿನ ಕೊರತೆ ಉಂಟಾಗುವ ಅಪಾಯವಿದೆ. ರೆಸಾರ್ಟ್‌ಗಳಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿ ಹೇಗೆ ಎಂಬುದಕ್ಕೆ ಒಂದು ಸ್ಪಷ್ಟ ಉತ್ತರವೂ ಇಲ್ಲ. ಇದು ಮುಂದಿನ ದಿನಗಳಲ್ಲಿ ಬಾರಿ ಸಮಸ್ಯೆಯನ್ನು ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಉಂಟು ಮಾಡುವ ಲಕ್ಷಣಗಳಿವೆ.
ರೆಸಾರ್ಟ್‌ಗಳಿಂದ ಧಕ್ಕೆ: ಹೆಚ್ಚು ಆತಂಕಕಾರಿಯಾದ ಸಂಗತಿ ಎಂದರೆ ರೆಸಾರ್ಟ್‌ಗಳು ನಿರ್ಮಾಣವಾಗುತ್ತಿರುವ ಈ ಪ್ರದೇಶಗಳಲ್ಲಿ ನಿತ್ಯ ವನ್ಯ ಪ್ರಾಣಿಗಳು ಓಡಾಡುತ್ತವೆ. ಭಾರಿ ಕಟ್ಟಡಗಳ ನಿರ್ಮಾಣದಿಂದ ಅವುಗಳು ನಿತ್ಯ ಓಡಾಡುವ ಮಾರ್ಗಗಳಲ್ಲಿ ಅಡೆತಡೆಯುಂಟಾಗಿ ಇದು ಮಾನವ ಹಾಗೂ ಪ್ರಾಣಿ ಸಂಘರ್ಷವನ್ನು ಅಧಿಕಗೊಳಿಸುವ ಸಾಧ್ಯತೆಗಳಿವೆ. ಒಂದು ಸುಂದರ ನೀರವತೆಯ ವಾತಾವರಣಕ್ಕೆ ರೆಸಾರ್ಟ್‌ಗಳು ಧಕ್ಕೆ ತರುವ ಸಂಭವವೂ ಇದೆ.
ಜನ ಮತ್ತು ವಾಹನ ಓಡಾಟ ಅಧಿಕವಾದ ಹಾಗೆ ಮಾಲಿನ್ಯವೂ ಜಾಸ್ತಿಯಾಗುತ್ತದೆ. ಈ ಪ್ರದೇಶಗಳ ಶಾಂತ ವಾತಾವರಣ ಮರೆಯಾಗಿ ಒಂದು ರೀತಿಯ ಗೌಜು ಕಂಡು ಬರುತ್ತದೆ. ಪಶ್ಚಿಮಘಟ್ಟದ ದಟ್ಟ ಕಾಡಿನ ಮಧ್ಯದಲ್ಲಿರುವ ಕಾಫಿ ತೋಟಗಳಲ್ಲಿ ಕಾರ್ಪೋರೇಟ್ ಕಂಪನಿಗಳು ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸುವುದಕ್ಕೆ ಅವಕಾಶ ನೀಡುತ್ತಾ ಹೋದರೆ ಮುಂದೊಂದು ದಿನ ದಟ್ಟ ಕಾಡಿನ ಪರಿಸರ ಕಾಂಕ್ರೀಟ್ ಕಾಡಿನ ಪರಿಸರವಾಗಿ ಮಾರ್ಪಡುವುದು ಖಚಿತ ಎಂದು ಹೇಳಿದ್ದಾರೆ.
ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿರುವ ಬಹುತೇಕ ಪ್ರದೇಶಗಳು ಭದ್ರಾ ಅಭಯಾರಣ್ಯ ಸೇರಿದಂತೆ ರಕ್ಷತಾರಣ್ಯದ ಬಫರ್ ವಲಯದಲ್ಲಿ ಬರುವುದರಿಂದ ಮುಂದಿನ ದಿನಗಳಲ್ಲಿ ವನ್ಯ ಪ್ರಾಣಿಗಳ ಓಡಾಟಕ್ಕೆ ತೀವ್ರತರದ ಅಡೆತಡೆಗಳನ್ನು ಉಂಟು ಮಾಡುತ್ತದೆ. ಜಿಲ್ಲಾಡಳಿತ ಈ ಪ್ರದೇಶಗಳ ಸೂಕ್ಷ್ಮತೆಯನ್ನು ಗಮನಿಸಿ ಹಾಗೂ ಪರಿಸರದ ಪ್ರಾಮುಖ್ಯತೆಯನ್ನು ಅವಲೋಕಿಸಿ ರೆಸಾರ್ಟ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಹಾಗೂ ಅನುಮತಿ ನೀಡಬಾರದೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments