ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ವಿಫಲ
ತರೀಕೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರವೇ ತಾಲೂಕು ಘಟಕ ವತಿಯಿಂದ ಗುರುವಾರ ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಕೃತಿ ದಹನ ಮಾಡಲಾಯಿತು. ತುದೀಪೇಟೆ ಎ.ಕೆ. ಕಾಲೋನಿಯಲ್ಲಿ ಸುಮಾರು 3 ವರ್ಷದಿಂದ ಬೋರ್‌ವೆಲ್ ಸರಿಯಿಲ್ಲ, ನಗರ ಪ್ರದೇಶದಲ್ಲಿ ಸ್ವಚ್ಛತೆ ಸಂಪೂರ್ಣ ವಿಫಲವಾಗಿದೆ. ನೀರನ ವ್ಯವಸ್ಥೆ ಸರಿಯಿಲ್ಲ, ಬೇಸಿಗೆ ಇರುವುದರಿಂದ ಜನರು ರೋಗದಿಂದ ಬಳಲುತ್ತಿದ್ದಾರೆ, ತರೀಕೆರೆ ಮುಖ್ಯ ರಸ್ತೆಗಳು ಸರಿಯಿಲ್ಲ. ಮಹಾತ್ಮಾಗಾಂಧಿ ಉದ್ಯಾನವನ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದನ್ನು ಮುಂದುವರಿಸುವಂತೆ ಒತ್ತಾಯಿಸಿ ಮನವಿ ನೀಡಲಾಯಿತು.
ಉಪವಿಭಾಗಾಧಿಕಾರಿಯ ಆದೇಶವಿದ್ದರೂ ಪುರಸಭೆ ಮುಖ್ಯಾಧಿಕಾರಿಗಳು ನಗರ ಪ್ರದೇಶದಲ್ಲಿ ವಾಸವಿರುವುದಿಲ್ಲ, ಕೆಲವು ಫಲಾನುಭವಿಗಳ ವಿಚಾರ ಕೇಳಿದಾಗ ಕಾನೂನು ಸಬೂಬು ಹೇಳುವುದು ಹಾಗೂ ಇವರಿಗೆ ಅನಾನುಕೂಲವಾಗುವುದಾದರೆ ಕಾನೂನನ್ನು ಗಾಳಿಗೆ ತೂರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದೆ ಅನೇಕ ಕೆಲಸಗಳನ್ನು ಉಲ್ಲಂಘಿಸಿದ್ದಾರೆ. ಕೆಲವೊಂದು ವಾಹನಗಳ ಖರೀದಿ ಹಾಗೂ ಪುರಸಭಾ ಸಾಮಗ್ರಿಗಳನ್ನು ಸಾಮಾನ್ಯ ಸಭೆಗೆ ತರದೆ ಇವರೇ ಉತ್ತರಾಧಿಕಾರಿಯಾಗಿ ಖರೀದಿಸಿರುತ್ತಾರೆ, ಇದರಿಂದ ಪುರಸಭೆಗೆ ನಷ್ಟವಾಗಿದೆ, ಕೆಲವರ ಸರ್ವೆ ನಂಬರು ತೆಗೆದು ಜಮೀನನ್ನು ಪುರಸಭೆಗೆ ಆಕ್ರಮಿಸಿಕೊಳ್ಳುತ್ತೇವೆ ಎಂದು ಹೆದರಿಸಿರುವ ಉದಾಹರಣೆ ಕಂಡುಬಂದಿದೆ ಎಂದು ಆರೋಪಿಸಿದರು.
ಅನ್ಯಕ್ರಾಂತ ಗ್ರೀನ್ ಬೆಲ್ಟ್‌ನಿಂದ ಯಲ್ಲೋ ಬೆಲ್ಟ್‌ಗೆ ಮಾಡಿಸಿರುತ್ತೇವೆಂದು ಮೋಸ ಮಾಡಿರುವ ಉದಾಹರಣೆ ಕಂಡುಬಂದಿದೆ, ಎಲ್ಲಾ ಲೋಪಗಳ ಬಗ್ಗೆ ಉನ್ನತ ಮಟ್ಟದಲ್ಲಿ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿ ವಿನಂತಿ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಕರವೇ ಗೌರವಾಧ್ಯಕ್ಷ ಟಿ.ಕೆ. ಪ್ರಕಾಶ್, ಅಧ್ಯಕ್ಷ ಆರ್.ಜಿ. ವಿಶ್ವನಾಥ್(ಕಾಶಿ) ರವಿ, ಶರಣ, ಲೋಹಿತ್, ಸಂತೋಷ್ ದಿನೇಶ್, ಅಭಿಜಿತ್, ನವೀನ್, ಗಜೇಂದ್ರ, ಸೊಸೈಟಿ ಮೋಹನ್, ಸರಸ್ವತಿ ಮಹಿಳಾ ಸಂಘ, ಶ್ರೀ ಮಂಜುನಾಥ ಮಹಿಳಾ ಸಂಘ, ಚೌಡೇಶ್ವರಿ ಮಹಿಳಾ ಸಂಘ, ಗೌರಮ್ಮ ಮಹಿಳಾ ಸಂಘ, ಶ್ರೀ ಭುವನೇಶ್ವರ ಸಂಘ, ಕರವೇ ಸದಸ್ಯರು ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.