ಅಫ್ಜಲ್ಗೆ ಗಲ್ಲು: ವಿಜಯೋತ್ಸವ
ಚಿಕ್ಕಮಗಳೂರು: ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಸ್ವಾಗತಿಸಿ ಹಿಂದೂ ಸಂಘಟನೆಗಳು ಶನಿವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದವು.
ಬಜರಂಗದಳ, ವಿಶ್ವಹಿಂದೂ ಪರಿಷತ್ ಬಿಜೆಪಿ ಮುಖಂಡರು ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹನುಮಂತಪ್ಪ ವೃತ್ತಕ್ಕೆ ಬಂದು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಇದರ ಜತೆಗೆ ಸಿಹಿಯನ್ನು ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್, ತಾಪಂ ಉಪಾಧ್ಯಕ್ಷ ಪುಟ್ಟೇಗೌಡ, ಜಿಲ್ಲಾ ಕಾರ್ಯದರ್ಶಿ ವರಸಿದ್ಧಿ ವೇಣುಗೋಪಾಲ್, ನಗರಸಭಾ ಸದಸ್ಯ ಎಚ್.ಡಿ. ತಮ್ಮಯ್ಯ, ವಿಎಚ್ಪಿ ಮುಖಂಡರಾದ ಪ್ರೇಮ್ಕಿರಣ್, ರಂಗನಾಥ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಅಫ್ಜಲ್ ಗುರುಗೆ ಗಲ್ಲಿಗೇರಿಸಿರುವುದನ್ನು ಸ್ವಾಗತಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ವಿಜಯಪುರ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ನಾಗರಿಕರಿಗೆ ಸಂದ ಜಯ: ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ತಡವಾಗಿದ್ದರೂ ಸಹಾ ರಾಷ್ಟ್ರದ ನ್ಯಾಯಾಂಗದ ಮೇಲೆ ನಂಬಿಕೆಯಿಟ್ಟು ಗಲ್ಲು ಶಿಕ್ಷೆ ವಿಧಿಸಿರುವುದು ರಾಷ್ಟ್ರದ ನಾಗರಿಕರಿಗೆ ಸಂದ ಜಯವಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದ ಮೇಲೆ ದಾಳಿ ಮಾಡುವ ಉಗ್ರಗಾಮಿಗಳಿಗೆ ಕಠಿಣ ಶಿಕ್ಷೆ ಕಾದಿದೆ ಎಂಬುದು ಉಗ್ರಗಾಮಿಗಳನ್ನು ಈ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆ ವಿಧಿಸುವ ಗಂಟೆಯಾಗಿದೆ ಎಂದು ಶ್ರೀರಾಮ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಅನಿಲ್ ನಾಯಕ್, ಉಪಾಧ್ಯಕ್ಷ ವಿಜಯ್, ರಂಜಿತ್ ಶೆಟ್ಟಿ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
ಸ್ವಾಗತ: ಸಂಸತ್ ಭವನದ ಮೇಲೆ ದಾಳಿ ಮಾಡಿದ್ದ ಉಗ್ರಪಾತಕಿ ಅಫ್ಜಲ್ ಗುರುಗೆ ನೇಣು ಹಾಕಿರುವುದನ್ನು ಚಿಕ್ಕಮಗಳೂರು ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಹೀರ್ ಅಹಮದ್ ಸ್ವಾಗತಿಸಿದ್ದಾರೆ.
ಸರ್ಕಾರದ ಈ ಕ್ರಮದಿಂದ ಭಾರತ ದೇಶದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಹಾಗೂ ಪದೇ ಪದೇ ದೇಶದ ವಿವಿಧೆಡೆ ದಾಳಿ ನಡೆಸಿ ಅಮಾಯಕ ಜೀವದ ಜತೆ ಚೆಲ್ಲಾಟವಾಡುವ ಉಗ್ರರಿಗೆ ಈ ಮೂಲಕ ತಕ್ಕ ಸಂದೇಶ ರವಾನೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.