ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈದ್ಯರ ಮುಷ್ಕರ: ರೋಗಿಗಳ ಪರದಾಟ

Parashurama
Updated On : 10 Feb 2013, 10:35 am

ಚಿಕ್ಕಮಗಳೂರು: ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ  ಶನಿವಾರ ತಟ್ಟಿತು.
ತುರ್ತು ಸೇವೆಗೆ ಒಪ್ಪಿಕೊಂಡಿದ್ದ ವೈದ್ಯರು ಶನಿವಾರ ಮಧ್ಯಾಹ್ನ ದಿಢೀರ್ ಹಿಂದಕ್ಕೆ ಸರಿದಿದ್ದರಿಂದ ರೋಗಿಗಳು ಪರದಾಡುವಂತ್ತಾಯಿತು. ಜಿಲ್ಲಾ ಕೇಂದ್ರಕ್ಕೆ ಬಂದಿದ್ದ ಕೆಲವು ತುರ್ತು ಚಿಕಿತ್ಸಾ ರೋಗಿಗಳನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಹಾಸನದ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದರು. ಸಂಪುಟದ ಉಪ ಸಮಿತಿ ಬೇಡಿಕೆಗೆ ಸ್ಪಂದಿಸದೆ ಇದ್ದರಿಂದ ಶುಕ್ರವಾರದಿಂದ ಆರೋಗ್ಯ ಇಲಾಖೆಯೆ ಸಿಬ್ಬಂದಿಗಳು ಅನಿರ್ದಿಷ್ಟಾವಧಿಯ ಮುಷ್ಕರದ ಹಾದಿ ತುಳಿದಿದ್ದಾರೆ. ಮೊದಲ ದಿನದಂದು ತುರ್ತು ಸೇವೆಯನ್ನು ಒದಗಿಸಲು ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಒಪ್ಪಿ ಕೆಲಸಕ್ಕೆ ಹಾಜರಾಗಿದ್ದರು.
ಶನಿವಾರ ಮಧ್ಯಾಹ್ನದ ವರೆಗೆ ಈ ಸೇವೆಯನ್ನು ಮುಂದುವರೆಸಿದ್ದರು. ಆದರೆ, 12 ಗಂಟೆಯ ನಂತರದಲ್ಲಿ ಯಾರೂ ಕೂಡ ಕೆಲಸಕ್ಕೆ ಹಾಜರಾಗಿರುವುದಿಲ್ಲ. ಹೊರ ರೋಗಿಗಳ ವಿಭಾಗದ ಬಾಗಿಲು ಮುಚ್ಚಿದೆ. ಇನ್ನು ತುರ್ತು ಸೇವೆಯ ವಾರ್ಡ್ ಸಹ ಬಿಕೋ ಎನ್ನುತ್ತಿದೆ.
ಯಾವುದೇ ಸೇವೆ ಇಲ್ಲ: ವೈದ್ಯರ ಪ್ರತಿಭಟನೆ ಅರಿತ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಪ್ರತಿಭಟನೆಯ ಅರಿವಿಲ್ಲದೆ ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬಂದಿರುವ ಬಡ ರೋಗಿಗಳು ವಿಧಿ ಇಲ್ಲದೆ ಮನೆಗಳಿಗೆ ವಾಪಸ್ ಹೋಗುತ್ತಿರುವುದು ಕಂಡು ಬಂದಿತು.
ಸಂಕಷ್ಟ ಪರಿಸ್ಥಿತಿ: ವೈದ್ಯರು ಇಲ್ಲದಿದ್ದರಿಂದ ಯಾವ ರೋಗಿಯನ್ನು ಸಹ ಚಿಕಿತ್ಸೆಗಾಗಿ ದಾಖಲು ಮಾಡಿಕೊಳ್ಳುತ್ತಿಲ್ಲ. ಹಾಲಿ ಇರುವ ರೋಗಿಗಳಿಗೆ ನರ್ಸ್‌ಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರದಂದು ನರ್ಸ್‌ಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಹೀಗಾದರೆ ರೋಗಿಗಳ ಪರಿಸ್ಥಿತಿ ಇನ್ನಷ್ಟು ಕಷ್ಟವಾಗಲಿದೆ.
ಆಪರೇಷನ್ ಇಲ್ಲ: ವೈದ್ಯರ ಮುಷ್ಕರ ಹಾಗೂ ರೋಗಿಗಳಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಜಿಲ್ಲಾ ಸರ್ಜನ್ ಡಾ. ಓ.ಜಿ. ಪ್ರಕಾಶ್, ವೈದ್ಯರು ಸೇವೆಗೆ ಹಾಜರಾಗುತ್ತಿಲ್ಲ. ತುರ್ತು ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಬರುವ ತುರ್ತು ಸೇವೆಯ ರೋಗಿಗಳನ್ನು ಹಾಸನದ ಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಡಲಾಗುತ್ತಿದೆ. ಶನಿವಾರದಂದು ಹೆರಿಗೆ, ವಿಷ ಸೇವನೆಯ ಎರಡು ಕೇಸುಗಳು ಬಂದಿದ್ದು, ಇವರನ್ನು ಜಿಲ್ಲಾ ಆಸ್ಪತ್ರೆಯ ಅಂಬುಲೆನ್ಸ್ ವಾಹನದಲ್ಲಿ ಹಾಸನಕ್ಕೆ ಕಳುಹಿಸಿಕೊಡಲಾಯಿತು. ಇಲ್ಲಿ ಆಪರೇಷನ್ ಕೆಲಸವೂ ಸಹ ನಿಂತಿದೆ ಎಂದು ಹೇಳಿದ್ದಾರೆ.
ಶವ ಪರೀಕ್ಷೆಯೂ ಇಲ್ಲ: ಶವ ಪರೀಕ್ಷಾ ವಿಭಾಗದಲ್ಲಿನ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಈ ಕೆಲಸವೂ ಸಹ ಆಗುತ್ತಿಲ್ಲ. ಶನಿವಾರ ಮಧ್ಯಾಹ್ನ ಮಲ್ಲಂದೂರಿನಿಂದ ಶವವನ್ನು ತರಲಾಗಿತ್ತು. ವೈದ್ಯರಿಲ್ಲದೆ, ಶವವನ್ನು ಹಾಸನಕ್ಕೆ ಕಳುಹಿಸಿಕೊಡಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಸೇವೆಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದ್ದಾರೆ.
ಜನರ ಪರದಾಟ: ಚಿಕಿತ್ಸೆಗಾಗಿ  ಆಸ್ಪತ್ರೆಗೆ  ಬಂದಿದ್ದ ರೋಗಿಗಳು ಸರ್ಕಾರ ಮತ್ತು ವೈದ್ಯರಿಗೆ ಬೈಯುತ್ತಿರುವ ದೃಶ್ಯಗಳು ಕಂಡು ಬಂದವು.
ಮಲ್ಲಂದೂರಿನಿಂದ ಚಿಕಿತ್ಸೆಗಾಗಿ ಬಂದಿದ್ದ ಹನುಮಂತಪ್ಪ ಎಂಬುವವರು, ಇಲ್ಲಿಗೆ ಬರುವವರು ನಮ್ಮಂತ ಬಡವರು.
ಏಕಾ ಏಕಿ ಹೀಗೆ ಬಾಗಿಲು ಮುಚ್ಚಿದರೆ, ನಾವು ಎಲ್ಲಿಗೆ ಹೋಗಬೇಕು. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲು ನಮ್ಮಲ್ಲಿ ಕಾಸಿಲ್ಲ, ವಯಸ್ಸಾಗಿರುವ ತಂದೆಯನ್ನು ವಾಪಸ್ ಕರೆದುಕೊಂಡು ಹೋಗಬೇಕಾಗಿದೆ. ನಮ್ಮ ಶಾಪ ಸರ್ಕಾರಕ್ಕೆ, ವೈದ್ಯರಿಗೆ ತಟ್ಟಲಿ ಎಂದು ಬೈಯುತ್ತಾ ಆಸ್ಪತ್ರೆಯ ಆವರಣದಿಂದ ಹೊರಗೆ ನಡೆದರು.
   ವೈದ್ಯರ ಮುಷ್ಕರ ಮುಂದುವರೆದರೆ ಬಡ ರೋಗಿಗಳಿಗೆ ಹಾಗೂ ತುರ್ತು ಸೇವೆಯ ಅಗತ್ಯವಿರುವವರಿಗೆ ತುಂಬಾ ತೊಂದರೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments