ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇತಿಮಿತಿ ಅನ್ವಯ ಜೀವನ ಸಾಗಿಸಿ

Parashurama
Updated On : 11 Feb 2013, 11:22 am

ಚಿಕ್ಕಮಗಳೂರು: ಇತಿಮಿತಿ ಅರ್ಥಮಾಡಿಕೊಂಡು ಜೀವನ ಸಾಗಿಸಬೇಕೆಂಬುದು ಪ್ರಕೃತಿಯ ಸಂದೇಶ ಎಂದು ಸಾಣ್ಣೇಹಳ್ಳಿ ಮಠಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಹೊಯ್ಸಳ ಕನ್ನಡಬಳಗದ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಕನ್ನಡನುಡಿಹಬ್ಬದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಕೃತಿಯಲ್ಲಿ ಅನೇಕ ಬದಲಾವಣೆಯನ್ನು ಕಾಣುತ್ತಿದ್ದೇವೆ. ಚಳಿಗಾಲದಲ್ಲಿ ಚಳಿ ಇಲ್ಲ, ಮಳೆಗಾಲದಲ್ಲಿ ಮಳೆ ಇಲ್ಲ, ಬೇಸಿಗೆಗಾಲದಲ್ಲಿ ಬಿಸಿಲಧಗೆ ಇಲ್ಲದ ವಾತಾವರಣ. ಪರಿಸರ ಸಮತೋಲವನ್ನು ಕಾಪಾಡದಿರುವುದೇ ಇದಕ್ಕೆ ಕಾರಣ. ಒಂದು ರೀತಿಯಲ್ಲಿ ಮನುಷ್ಯ ಪರಿಸರದ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ.
ತಮ್ಮ ಇತಿಮಿತಿ ಅರಿಯಿರಿ: ತನ್ನ ಇತಿಮಿತಿಯನ್ನು ಅರಿತು ಜೀವನ ಸಾಗಿಸಬೇಕೆಂಬ ಪ್ರಕೃತಿಯ ಸಂದೇಶವನ್ನು ಪಾಲಿಸಿದ್ದೇ ಆದರೆ ಬದುಕು ಹಸನಾಗುತ್ತದೆ. ನಾಡು, ನುಡಿಯನ್ನು ಕೊಂಡಾಡುವ ನುಡಿಹಬ್ಬಕ್ಕೆ ಮಳೆಯ ಶುಭ ಸಿಂಚನವಾಗುತ್ತಿದೆ ಎಂದ ಸ್ವಾಮೀಜಿ, ಕನ್ನಡಾಂಬೆ ಎಲ್ಲರಿಗೂ ಶುಭವನ್ನುಂಟುಮಾಡಲಿ ಎಂದು ಹಾರೈಸಿದರು.
ಕನ್ನಡದ ಮೇಲಿನ ಪ್ರೀತಿ: ಚಲನಚಿತ್ರ ನಟ ವಿಜಯ ರಾಘವೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಾಡು, ನುಡಿಯ ಬಗ್ಗೆ ಇರುವ ಅಭಿಮಾನ ಸಂತಸ ತರುತ್ತದೆ. ಮಳೆಯ ನಡುವೆಯೂ ಜನರಿಗೆ ಕನ್ನಡದ ಮೇಲಿನ ಪ್ರೀತಿಗೆ ಈ ಸಮಾರಂಭವೇ ಸಾಕ್ಷಿ ಎಂದರು.
ಸಾಹಿತಿ ಎಚ್.ಎಂ. ನಾಗರಾಜ್‌ರಾವ್ ಕಲ್ಕಟ್ಟೆ ವಿಶೇಷ ಉಪನ್ಯಾಸ ನೀಡಿ, ಕನ್ನಡಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ನಮ್ಮ ಸ್ವಾಭಿಮಾನದ ಸಂಕೇತ. ಕನ್ನಡದ ಮೊದಲ ರಾಜವಂಶ ಕದಂಬ ಸ್ವಾಭಿಮಾನದಿಂದ ರೂಪುಗೊಂಡದ್ದು. ಕನ್ನಡ ಭಾಷೆ, ಸಂಸ್ಕೃತಿ, ಕಲಾಪರಂಪರೆ, ಶಿಲ್ಪ, ಸಾಹಿತ್ಯಕ್ಕೆ ವಿಶೇಷವಾದ ಸಾಮರ್ಥ್ಯವಿದ್ದರೂ ಅನ್ಯಭಾಷೆಗಳು ಇಂಗ್ಲಿಷ್ ದೊಡ್ಡದೆಂಬ ಸಂಸ್ಕೃತಿಯನ್ನು ನಾವೇ ಆರೋಪಿಸಿಕೊಳ್ಳುತ್ತಿದ್ದೇವೆ.  ಕನ್ನಡಪರಂಪರೆ ನಮ್ಮ ಮನೆ. ನಮ್ಮ ತಾಯಿಯನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಲಾವಿದರನ್ನು ಆಧರಿಸಿ: ನಮ್ಮ ಕಲಾವಿದರನ್ನು ಆಧರಿಸಬೇಕು. ಹಳ್ಳಿಯ ಸಂಸ್ಕೃತಿ ನಿಜವಾದ ಸೌಂದರ್ಯ ಕಲಾವಿದರನ್ನು ರೂಪಿಸುತ್ತದೆ. ಇಲ್ಲಿ ಸಿಗುವ ಪ್ರೀತಿ ಹಂಚಿಕೊಂಡು ನಮ್ಮತನವನ್ನು ಕಾಪಾಡಿಕೊಂಡು ಬೆಳೆಸುವಂತಾಗಬೇಕು. ಕನ್ನಡದ ಕಾವೇರಿ ತುಂಬಿ ಹರಿಯಲಿ, ಎಲ್ಲರಿಗೂ ತೃಪ್ತಿ ಆಗುವಷ್ಟು ನೀರು ಹರಿಸಲಿ ಎಂದು ಹೇಳಿದರು.
ಹೊಯ್ಸಳ ಕನ್ನಡಬಳಗದ ಅಧ್ಯಕ್ಷ ಕೆ.ಆರ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶಿವಪ್ರಸಾದ್ ಪ್ರಾಸ್ತಾವಿಸಿದರು. ತರೀಕೆರೆ ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ. ಶಿವಶಂಕರಪ್ಪ, ತಾಪಂ ಸದಸ್ಯ ಸೀತಾರಾಮ, ಜಿ.ಪಂ. ಸದಸ್ಯೆ ಹೇಮಾವತಿ ಕೃಷ್ಣಪ್ಪ, ಮಾಜಿ ಸದಸ್ಯರುಗಳಾದ ಎ.ಸಿ. ಚಂದ್ರಣ್ಣ ಮತ್ತು ಎಲ್. ಶಿವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಪಿ. ಲೋಕೇಶ್, ಅಜ್ಜಂಪುರದ ಶಿವಾನಂದ, ತರೀಕೆರೆಯ ಶ್ರೀನಿವಾಸ, ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಿಬಾಯಿ, ಉಪಾಧ್ಯಕ್ಷ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments