ಬಜೆಟ್: ರು. 20.06 ಲಕ್ಷ ಉಳಿತಾಯದ ಆಯವ್ಯಯ
ನರಸಿಂಹರಾಜಪುರ: ಪಟ್ಟಣ ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ 2013-14ನೇ ಸಾಲಿನ ಬಜೆಟ್ ಮಂಡಿಸಲಾಗಿದ್ದು ರು. 11.15 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರುಕ್ಮಣಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2013-14ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದಿಸಲಾಯಿತು. 2013-14ನೇ ಸಾಲಿನಲ್ಲಿ ಒಟ್ಟು ರು. 11.15 ಕೋಟಿ ಆದಾಯ ನಿರೀಕ್ಷೆ, ರು. 10.95 ಕೋಟಿ ಖರ್ಚು ಹಾಗೂ ರು. 20.06 ಲಕ್ಷ ಉಳಿತಾಯದ ಆಯವ್ಯಯ ಮಂಡಿಸಲಾಯಿತು.
2013-14ನೇ ಸಾಲಿನಲ್ಲಿ ರಸ್ತೆ ಅಭಿವೃದ್ಧಿಗೆ ರು. 4.62 ಕೋಟಿ, ಚರಂಡಿ ಅಭಿವೃದ್ಧಿಗೆ ರು. 75 ಲಕ್ಷ, ಗೋಮಾಳ ನಿರ್ಮಾಣಕ್ಕೆ ರು. 5 ಲಕ್ಷ, ನೀರು ವಿತರಣಾ ವ್ಯವಸ್ಥೆಗೆ ರು. 40 ಲಕ್ಷ, ಬಸ್ತಿಮಠ, ಪಟ್ಟಣ ಪಂಚಾಯ್ತಿ ಸಮೀಪ ಹಾಗೂ ನ್ಯಾಯಾಲಯದ ಸಮೀಪ ಹೈಟೆಕ್ ಶೌಚಾಲಯ ನಿರ್ಮಿಸಲು ರು. 25 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕೆ 31.50 ಲಕ್ಷ, ಅಂಗವಿಕಲರ ಕಾರ್ಯಕ್ರಮಕ್ಕೆ ರು. 4.20 ಲಕ್ಷ, ಇತರೆ ವರ್ಗದವರ ಕಲ್ಯಾಣಕ್ಕೆ ರು. 10.50 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಯಿತು.
ನಿವೇಶನ ನೀಡಿಲ್ಲ: ಆಶ್ರಯ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ನಿವೇಶನರಹಿತರಿಗೆ ಒಂದೂ ನಿವೇಶನ ನೀಡಲು ಸಾದ್ಯವಾಗಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ಸುಬಾನ್ ಹಾಗೂ ಪಿ.ಆರ್. ಸುಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿಯವರಿಗೆ ಸೇರಿದ ಜಾಗದಲ್ಲಿ ಆಶ್ರಯ ನಿವೇಶನ ಕೊಡಲು ತೀರ್ಮಾನಿಸಿದ್ದರಿಂದ ಈ ಪ್ರಕರಣ ನ್ಯಾಯಾಲಯದ ಮೆಟ್ಟಲೇರುವಂತಾಯಿತು. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಪಟ್ಟಣದಲ್ಲಿ ಅರಣ್ಯ ಇಲಾಖೆಯವರು ಮರದ ದಿಮ್ಮಿಗಳನ್ನು ಸಂಗ್ರಹಿಸಲು ತೆಗೆದುಕೊಂಡಿರುವ ಜಾಗವು ಕಂದಾಯ ಭೂಮಿಯಾಗಿದೆ. ಇದರಲ್ಲಿ 5 ಎಕರೆ ಬಿಡಿಸಿಕೊಂಡು ನಿವೇಶನರಹಿತರಿಗೆ ವಿತರಿಸಲು ಸಾಧ್ಯವಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನವರೇ ಆಗಿದ್ದರೂ ನಿವೇಶನ ನೀಡಲು ಸಾಧ್ಯವಾಗಿಲ್ಲ. ಖಾಸಗಿ ಜಾಗವನ್ನು ಹಣ ನೀಡಿ ಖರೀದಿಸಿ ನಿವೇಶನ ವಿತರಿಸಬಹುದಿತ್ತು ಎಂದು ಸುಕುಮಾರ್ ಅಭಿಪ್ರಾಯಪಟ್ಟರು.
ವಾಹನ ನಿಲುಗಡೆ: ಬಸ್ಸು ನಿಲ್ದಾಣದಿಂದ ಹಳೇ ಮಂಡಗದ್ದೆ ಸರ್ಕಲ್ವರೆಗೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿರುವುದರ ಬಗ್ಗೆ ತೀವ್ರ ಚರ್ಚೆ ನಡೆಯಿತು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯೆ ಲೇಖಾ ವಸಂತ್ ಮಾತನಾಡಿ, ರಸ್ತೆಯ ಎರಡು ಬದಿಯಲ್ಲಿ 6 ಅಡಿ ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಸದಸ್ಯ ಅಬ್ದುಲ್ ಸುಬಾನ್ ಮಾತನಾಡಿ, ರಸ್ತೆಯ ಬದಿಯಲ್ಲಿ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಬೇಕು ಎಂದರು.
ರಸ್ತೆಯ ಎರಡೂ ಬದಿಯಲ್ಲಿ ಕೇವಲ 6 ಅಡಿ ಜಾಗ ತೆರವುಗೊಳಿಸಿದರೆ ರಸ್ತೆ ಅಗಲ ಸಾಕಾಗುವುದಿಲ್ಲ ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟರು.
ಒಡೆಯರ್ ಹೆಸರಿಡಿ: ಪಟ್ಟಣದ ವಾಟರ್ಟ್ಯಾಂಕ್ ಸರ್ಕಲ್ಗೆ ನರಸಿಂಹರಾಜ ಒಡೆಯರ್ ವೃತ್ತ ಎಂದು ಹೆಸರಿಡಬೇಕು ಎಂದು ಸದಸ್ಯೆ ಲೇಖಾ ವಸಂತ್ ಸಲಹೆ ನೀಡಿದರು. ಸದಸ್ಯ ಅಬ್ದುಲ್ ಸುಬಾನ್ ಮತ್ತೊಂದು ಸಲಹೆ ನೀಡಿ, ತಾಲೂಕಿನಲ್ಲಿ ಪ್ರಥಮ ಎಂ.ಎಲ್.ಸಿ ಯಾಗಿದ್ದ ಎಂ.ಪಿ. ಗೋವಿಂದೇಗೌಡರ ಹೆಸರಿಡಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರುಕ್ಮಿಣಿ ಸುರೇಶ್ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಕೆ. ರಾಜೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಿನಿ, ಮುಖ್ಯಾಧಿಕಾರಿ ನಾಗೇಂದ್ರ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.