ಇನ್ನೂ ಮುಂದುವರೆದ ವೈದ್ಯರ ಮುಷ್ಕರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಸೋಮವಾರವೂ ಮುಂದುವರೆದಿತ್ತು. ಚಿಕಿತ್ಸೆಗಾಗಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ವೈದ್ಯರುಗಳಿಲ್ಲ ಅದುದರಿಂದ ವಾರ್ಡ್ಗಳ ಬೆಡ್ಗಳು ಖಾಲಿ ಖಾಲಿಯಾಗಿವೆ.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚೆಂದರೆ ಸುಮಾರು ರು.0 ರಿಂದ 40 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೆ. 8ರ ಹಿಂದೆ ಒಳ ರೋಗಿಗಳಾಗಿ ದಾಖಲಾಗಿರುವವರಿಗೆ ವೈದ್ಯರು ತಪಾಸಣೆ ನಡೆಸಿ ನೀಡಿದ ಸಲಹೆಯ ಮೇರೆಗೆ ನರ್ಸ್ಗಳು ಔಷದೋಪಚಾರವನ್ನು ಮುಂದುವರೆಸಿದ್ದಾರೆ. ಹೆಚ್ಚುವರಿ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಕೆಲವು ಮಂದಿ ತಾವಾಗಿಯೇ ಆಸ್ಪತ್ರೆಯಿಂದ ಹೊರಗೆ ನಡೆಯುತ್ತಿದ್ದಾರೆ.
ರೋಗಿಗಳು ವಾಪಸ್: ವಾಸ್ತವಿಕವಾಗಿ ಒಳ ರೋಗಿಗಳಾಗಿ ದಾಖಲಾಗಿರುವ ವೈದ್ಯರೆ ರೋಗಿಗಳು ಮನೆಗಳಿಗೆ ತೆರಳಲು ಒಪ್ಪಿಗೆ ಸೂಚಿಸಬೇಕು. ಆದರೆ, ವೈದ್ಯರಿಲ್ಲದಿದ್ದರಿಂದ ರೋಗಿಗಳು ತಾವೇ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಸೋಮವಾರದಂದು ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಯಾವುದೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿರಲಿಲ್ಲ. ಆಸ್ಪತ್ರೆಯ ಆವರಣ ಬಿಕೋ ಎನ್ನುತ್ತಿತ್ತು. ಇನ್ನುಳಿದಂತೆ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಹಾಗೂ ಕಡೂರು ತಾಲೂಕು ಆಸ್ಪತ್ರೆಗಳಲ್ಲೂ ವೈದ್ಯರು ಕೆಲಸಕ್ಕೆ ಹಾಜರಾಗಿರಲಿಲ್ಲ. ತರೀಕೆರೆಯಲ್ಲೂ ಇದೇ ಪರಿಸ್ಥಿತಿ. ಆದರೆ, ಅಲ್ಲಿನ ಆಯುಷ್ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರು.
ವೈದ್ಯರ ಮುಷ್ಕರ ತಿಳಿದಿದ್ದರಿಂದ ರೋಗಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿಲ್ಲ. ಇನ್ನುಳಿದಂತೆ ಒಳ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ತುರ್ತು ಚಿಕಿತ್ಸೆಗಳಿಗೆ ಮಾತ್ರ ತೊಂದರೆ ಕಾಣಿಸಿಕೊಂಡಿದೆ.
ಪ್ರತಿಭಟನೆ: ವೈದ್ಯರ ಮುಷ್ಕರವನ್ನು ಖಂಡಿಸಿ, ಈ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಹೊರತು ಪಡಿಸಿ ಇನ್ನುಳಿದ ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವೈದ್ಯರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಭಟನಾಕಾರರು ಬಳಿಕ ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ, ನಾಲ್ಕು ದಿನ ಕಳೆದರೂ ಜನರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವೈದ್ಯರು ತಮ್ಮ ಬೇಡಿಕೆಗಳನ್ನು ನ್ಯಾಯಯುತವಾದ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕು. ಈ ರೀತಿಯಲ್ಲಿ ಜನರಿಗೆ ತೊಂದರೆ ನೀಡಬಾರದು. ಅಹಿಂಸಾ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಅನುಭವ ಇಲ್ಲದ ಸರ್ಕಾರ: ಕೆಜೆಪಿ ಮುಖಂಡ ಎಚ್.ಎಚ್. ದೇವರಾಜ್ ಮಾತನಾಡಿ, ರಾಜ್ಯ ಸರ್ಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ವೈದ್ಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಆರೋಗ್ಯ ಸಚಿವರು ವಿಫಲರಾಗಿದ್ದಾರೆ. ಇದೊಂದು ಅನುಭವವಿಲ್ಲದ ಸರ್ಕಾರ ಎಂದು ಟೀಕಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಎ.ಎನ್. ಮಹೇಶ್, ರಾಧಾ ಸುಂದರೇಶ್, ಈಶ್ವರ್, ಅಮ್ಜದ್, ಗುರುಶಾಂತಪ್ಪ, ಕೆ.ಕೆ. ಕೃಷ್ಣೇಗೌಡ, ಕೆ. ಮಹಮದ್, ರವೀಶ್ ಕ್ಯಾತನಬೀಡು, ಸಿ.ಎಚ್. ಲೋಕೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವೈದ್ಯರ ಮುಷ್ಕರ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿ ದಹನ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.