ಏಣಗಿ ಬಾಳಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ
ಚಿಕ್ಕಮಗಳೂರು: ಶ್ರೀ ಪೀಠದ ಅತ್ಯುನ್ನತ ಪುರಸ್ಕಾರ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಖ್ಯಾತ ನಾಟಕಕಾರ ಏಣಗಿ ಬಾಳಪ್ಪ ಅವರಿಗೆ ಪ್ರಸಕ್ತ ಸಾಲಿನಲ್ಲಿ ನೀಡಲಾಗುವುದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.
ನಗರದ ಹೊರವಲಯ ನಲ್ಲೂರು ಗ್ರಾಮದ ಕಲ್ಲೇದೇವರಹಳ್ಳಿಯಲ್ಲಿ ಸೋಮವಾರ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಪೀಠದ ಜಾತ್ರಾ ಮಹೋತ್ಸವದ ಪ್ರಥಮ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಪ್ರಸಕ್ತ ಸಾಲಿನ ಬಾಳೆಹೊನ್ನೂರು ಶ್ರೀಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಮಾ.2ರು.ರಿಂದ 29ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಎಲ್ಲ ದೈವಕೃಪೆ: ಮನುಷ್ಯ ಧನ, ಕನಕ, ವಸ್ತು, ಒಡವೆ, ಭೂಮಿ, ಸೀಮೆ ಏನೆಲ್ಲಾ ಪ್ರಾಪ್ತಿ ಮಾಡಿಕೊಂಡರೂ ಮಾನಸಿಕ ಶಾಂತಿ, ನೆಮ್ಮದಿ ಕಾಣುತ್ತಿಲ್ಲ. ಪರಸ್ಪರ ಸಂಘರ್ಷ ಸಮಸ್ಯೆಗಳು ಕಾಡುತ್ತಿವೆ. ಇವುಗಳಿಂದ ಮುಕ್ತರಾಗಲು ಧರ್ಮ ಮತ್ತು ಧರ್ಮ ಗುರುಗಳಿಗೆ ಶರಣಾಗುವುದು ಅನಿವಾರ್ಯ. ಭೂಮಿಯನ್ನು ಸೃಷ್ಟಿಸಿದ ಭಗವಂತನನ್ನು ಅವನು ಕೊಟ್ಟಿರುವ ಕೊಡುಗೆಗಳ ಮೂಲಕ ಕಾಣಬಹುದು. ಗಾಳಿ, ನೀರು, ಅನ್ನ ಎಲ್ಲವೂ ದೈವಕೃಪೆ. ಅವನ ಸ್ಮರಣೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಧರ್ಮದ ಕಡೆಗೆ ಒಲವು: ಕಾಲ ಕೆಟ್ಟಿದೆ ಎಂಬ ಮಾತು ಪದೇ ಪದೇ ಕೇಳುತ್ತೇವೆ. ವೈಜ್ಞಾನಿಕ ಆವಿಷ್ಕಾರದ ನಡುವೆ ಪ್ರಾಚೀನ ಸಂಪ್ರಾದಾಯ, ಸಂಸ್ಕೃತಿಯ ಬಗ್ಗೆ ಉದಾಸೀನತೆ ಇದ್ದರೂ ಶಾಶ್ವತ ಸುಖಕ್ಕಾಗಿ ಧರ್ಮದ ಕಡೆಗೆ ಒಲವು ವ್ಯಕ್ತವಾಗುತ್ತಿರುವುದು ಸುಳ್ಳಲ್ಲ.
ಹಿಂದೆಂದಿಗಿಂತಲೂ ಇಂದು ಧಾರ್ಮಿಕ ಭಾವನೆಗಳು ಹೆಚ್ಚು ಜಾಗೃತಗೊಳ್ಳುತ್ತಿವೆ. ಊರಿನ ಹಳೆಯ ದೇವಸ್ಥಾನ, ಮಠ, ಮಂದಿರಗಳು ಹೊಸ ರೂಪ ಪಡೆದು ಆವಿಷ್ಕಾರಗೊಳ್ಳುತ್ತಿರುವುದು ದೇವರ ಮೇಲಿನ ಜನರ ಭಕ್ತಿ ಮತ್ತು ಅಭಿಮಾನಕ್ಕೆ ಸಾಕ್ಷಿ ಎಂದರು.
ಧರ್ಮ ಪ್ರವೃತ್ತಿಯಾಗಲಿ: ಅಧ್ಯಕ್ಷತೆ ವಹಿಸಿದ್ದ ಹುಲೀಕೆರೆ ದೊಡ್ಡಮಠಾಧ್ಯಕ್ಷ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಮನುಷ್ಯನ ಪ್ರವೃತ್ತಿ ಆಗಬೇಕು. ವೇದಿಕೆಯ ಭಾಷಣ ಸರಕಾಗದೆ ಬದುಕಿನ ವೃತ ಧರ್ಮವಾಗಬೇಕು. ಸತ್ಪುರುಷರ ಸಹವಾಸದಿಂದ ಸಗಣಿಹುಳು ರಾಜಕುಮಾರನಾದ ಇತಿಹಾಸವಿದೆ ಎಂದ ಸ್ವಾಮೀಜಿ, ಪ್ರಸ್ತುತ ಜಗದ್ಗುರುಗಳು ನಡೆದಾಡುವ ರೇಣುಕರಂತೆ ಧರ್ಮಜಾಗೃತಿಗೆ ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ ಎಂದರು.
ಶಂಕರದೇವರ ಮಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿ, ದೇವಾಲಯಗಳು ಧಾರ್ಮಿಕ ಸಂಸ್ಕಾರ ನೀಡುವ ತಾಣಗಳೆಂದರು.
ಗ್ರಾಮಕ್ಕೆ ಪ್ರಥಮ ಬಾರಿ ಆಗಮಿಸಿದ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಉದ್ಭವಲಿಂಗ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಪುಷ್ಕರಣಿಗೆ ರೇಣುಕ ಪುಷ್ಕರಣಿ ಎಂದು ನಾಮಕರಣಗೊಳಿಸಿ ಗಂಗಾಪೂಜೆ ಸಲ್ಲಿಸಲಾಯಿತು. ಲೋಕಕಲ್ಯಾಣಾರ್ಥ ಇಷ್ಟಲಿಂಗ ಪೂಜೆ ನೆರವೇರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.