ನಗರಸಭೆ: ಜನ, ಪರಿಸರ ಸ್ನೇಹಿ ಬಜೆಟ್
ಚಿಕ್ಕಮಗಳೂರು: ನಗರಸಭೆ 201ರು.-14ನೇ ಸಾಲಿನ ಆಯವ್ಯಯದಲ್ಲಿ ಜನ ಮತ್ತು ಪರಿಸರ ಸ್ನೇಹಿ ಬಜೆಟ್ ಮಂಡಿಸಿದೆ.
ನಗರದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮುಂದಿನ ದಿನದಲ್ಲಿ ಬರುವ ಆದಾಯ ಮತ್ತು ಅನುದಾನವನ್ನು ನಾಗರಿಕರಿಗೆ ಉತ್ತಮ ಸೇವೆ ನೀಡುವ ಗುರಿಯನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಬರ, ಅತೀವೃಷ್ಟಿ ಹಾಗೂ ಇತರೆ ತುರ್ತು ಸಂದರ್ಭದಲ್ಲಿ ನೆರವು ನೀಡಲು ಅಧ್ಯಕ್ಷರ ವಿವೇಚನಾ ನಿಧಿ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 5 ಲಕ್ಷ ರುಪಾಯಿ ಮೀಸಲಿಡಲಾಗಿದೆ.
ಪ್ರಾರಂಭಿಕ ಶಿಲ್ಕು: ನಗರಸಭಾಧ್ಯಕ್ಷ ಪ್ರೇಮ್ಕುಮಾರ್ ಸೋಮವಾರ ನಗರಸಭೆಯಲ್ಲಿ 201ರು.-14ನೇ ಸಾಲಿನ ಆಯವ್ಯಯ ಮಂಡಿಸಿದರು. ಪ್ರಾರಂಭಿಕ ಶಿಲ್ಕು 528.84 ಲಕ್ಷ, 6809.70 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು, ಇದರಲ್ಲಿ 7110.65 ಲಕ್ಷ ವೆಚ್ಚವಾಗಲಿದ್ದು, ಉಳಿದ 227.89 ಲಕ್ಷದಲ್ಲಿ 800 ಮನೆಗಳ ನಿರ್ಮಾಣ ಮಾಡಿ, ಅಲ್ಲಿಗೆ ಮೂಲ ಸೌಲಭ್ಯ ಕಲ್ಪಿಸಲು 25 ಲಕ್ಷ ರುಪಾಯಿ ಮೀಸಲಿಡಲಾಗಿದ್ದು, ಇನ್ನುಳಿದಂತೆ 202.89 ಲಕ್ಷ ರು.ಗಳ ಉಳಿತಾಯ ಬಜೆಟ್ವನ್ನು ಮಂಡಿಸಿದರು.
ನಗರಸಭೆ ಪರಿಸರ ಸ್ನೇಹಿಯಾಗುವತ್ತ ಆಲೋಚಿಸಿದ್ದು, ಮೊದಲ ಹಂತದಲ್ಲಿ 5 ವಾರ್ಡ್ಗಳಿಗೆ ಸಂಪೂರ್ಣ ಸೌರಶಕ್ತಿ ಬೀದಿದೀಪ ಅಳವಡಿಸಲು ಉದ್ದೇಶಿಸಿದ್ದು, ಇದಕ್ಕಾಗಿ 180 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿದೆ. ಪಾದಚಾರಿಗಳಿಗೆ ಅನುಕೂಲವಾಗುವಂತೆ ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ನಗರದ ಹೃದಯ ಭಾಗದ ವಾರ್ಡ್ಗಳ ಚರಂಡಿಗಳಿಗೆ ಸ್ಲ್ಯಾಬ್ ನಿರ್ಮಿಸಿ ಪಾದಚಾರಿ ಮಾರ್ಗವನ್ನು ನಿರ್ಮಾಣ ಮಾಡಲು 150 ಮೀಸಲಿಡಲಾಗಿದೆ.
ಹೈಟೆಕ್ ಸ್ಕೈವಾಕ್: ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಪಾದಚಾರಿ ಸುರಂಗಮಾರ್ಗ ನಿರ್ಮಾಣ ಮಾಡಲು ಕಳೆದ ಸಾಲಿನಲ್ಲಿ ಉದ್ದೇಶಿಸಿದ್ದು, ತಾಂತ್ರಿಕವಾಗಿ ಅಡಚಣೆಯಾದ ಕಾರಣ ಈಗ ಪರ್ಯಾಯವಾಗಿ ಆಕ್ಸಿಲೇಟರ್ ಹೈಟೆಕ್ ಸ್ಕೈವಾಕ್ (ಆಕಾಶ ನಡಿಗೆ) ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಿದ್ದು, ಇದಕ್ಕಾಗಿ 100 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿದೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಇಂದಾವರ ನೆಲಭರ್ತಿ ಜಾಗದಲ್ಲಿ ವಿಂಡ್ರೋ ಪ್ಲಾಟ್ಫಾರ್ಮ್, ಸ್ಯಾನಿಟರಿ ಲ್ಯಾಂಡ್ಫಿಲ್ಲಿಂಗ್, ಕಾಂಕ್ರೀಟ್ ರಸ್ತೆ, ಕಾಂಪೌಂಡ್, ಲಿಚೆಟ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ.
ಇದರ ಜೊತೆಗೆ ಕಸದಿಂದ ರಸ ತೆಗೆಯುವ ಆಲೋಚನೆ ನಗರಸಭೆ ಹೊಂದಿದೆ. ಈ ನಿಟ್ಟಿನಲ್ಲಿ ಎರೆಹುಳು ಗೊಬ್ಬರ ಘಟಕ ಪ್ರಾಯೋಗಿಕವಾಗಿ ನಿರ್ಮಾಣ ಮಾಡಲಾಗಿದ್ದು, ಎಲ್ಲಾ ವಾರ್ಡ್ಗಳಲ್ಲಿ ಕನಿಷ್ಠ 15 ಎರೆಹುಳು ಗೊಬ್ಬರ ಘಟಕ ಸ್ಥಾಪಿಸಲಾಗುವುದು. ಅಲ್ಲದೇ ನಗರದ ವಿದ್ಯಾರ್ಥಿನಿಲಯಗಳಿಗೆ ಅನುಕೂಲವಾಗುವಂತೆ ಬಯೋವುಥೈನೇಷನ್ ಪ್ಲಾಂಟ್ ಅಳವಡಿಸಿ ಅಡುಗೆ ಅನಿಲ ಉಳಿತಾಯಕ್ಕೆ ನೆರವಾಗಲಾಗುವುದು. ಇದಕ್ಕಾಗಿ 10 ಲಕ್ಷ ಮೀಸಲಿಡಲಾಗಿದೆ.
ಉದ್ಯಾನವನ: ಹಳೆಯ ಜೈಲು ಕಟ್ಟಡದ ಜಾಗವನ್ನು ಜಿಲ್ಲಾಧಿಕಾರಿಗಳಿಂದ ನಗರಸಭೆಗೆ ಹಸ್ತಾಂತರಿಸುವಂತೆ ಕೋರಿದ್ದು, ಈ ಜಾಗದಲ್ಲಿ ಅತ್ಯಾಕರ್ಷಕ ಉದ್ಯಾನವನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ 50 ಲಕ್ಷ, ನಗರಸಭಾ ವ್ಯಾಪ್ತಿಗಳ ಆಸ್ತಿಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಿ ಆ ಮೂಲಕ ನಗರಸಭಾ ತೆರಿಗೆಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸುವ ದೃಷ್ಟಿಯಿಂದ ಎಲ್ಲಾ ಆಸ್ತಿಗಳನ್ನು ಗಣಕೀಕರಣಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ 5 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿದೆ.
ನಗರಸಭೆಯ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಉದ್ದೇಶದಿಂದ ಹಾಗೂ ಪೇಪರ್ ರಹಿತ ಕಚೇರಿ ಮಾಡುವ ದೃಷ್ಟಿಯಿಂದ ಇ-ಆಡಳಿತ ನಡೆಸಲು ಉದ್ದೇಶಿಸಿದ್ದು, ಎಲ್ಲಾ ವ್ಯವಹಾರಗಳು ಕಂಪ್ಯೂಟರ್ ಮುಖಾಂತರ ನಿರ್ವಹಿಸಲಾಗುವುದು.
ನಗರಸಭೆಯ ಆರ್ಥಿಕತೆಯನ್ನು ಸದೃಢಗೊಳಿಸುವ ದೃಷ್ಟಿಯಿಂದ ಕೆ.ಎಂ. ರಸ್ತೆ., ಎಬಿಸಿ ಎದುರು, ಎಂಇಎಸ್ ಕಾಂಪ್ಲೆಕ್ಸ್ ಎದುರು ಹಾಗೂ ಅಂಬೇಡ್ಕರ್ ರಸ್ತೆಯಲ್ಲಿ ಹೊಸದಾಗಿ 70 ಆಧುನಿಕ ಮಳಿಗೆಗಳನ್ನು ನಿರ್ಮಾಣ ಮಾಡುವುದು ಹಾಗೂ ನಗರದ ಹೊರವಲಯದ 4 ಭಾಗಗಳಲ್ಲಿ ಕುರಿ, ಕೋಳಿ, ಮೀನು ಮಳಿಗೆಗಳ ನಿರ್ಮಾಣ ಮಾಡಲು 250 ಲಕ್ಷ ಮೀಸಲಿಡಲಾಗಿದೆ.
ಕಸದಿಂದ ರಸ: ವಿಜಯಪುರ ಒಕ್ಕಲಿಗರ ಸಮುದಾಯ ಭವನದ ಎದುರು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಯಲು ರಂಗಮಂದಿರ (ಓಪನ್ ಏರ್ ಥಿಯೇಟರ್) ನಿರ್ಮಿಸಲು ಉದ್ದೇಶಿಸಲಾಗಿದೆ. ಕಸದಿಂದ ರಸ ಇಂದಿನ ಅವಶ್ಯಕತೆಗನುಗುಣವಾಗಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮಪರ್ಬಕವಾಗಿ ಬಳಸಲು ನಮ್ಮ ಆಡಳಿತ ಆಲೋಚಿಸಿದ್ದು, ಈ ನಿಟ್ಟಿನಲ್ಲಿ ಕಸದಿಂದ ಬಯೋಪವರ್ ಎನರ್ಜಿ ತಯಾರು ಮಾಡಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲು ಆಲೋಚಿಸಲಾಗಿದೆ. ನಗರದ ರಸ್ತೆ ಸುರಕ್ಷತೆ ಹಾಗೂ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಉದ್ದೇಶಿಸಲಾಗಿದೆ.
ನಗರದಲ್ಲಿರುವ ಕೊಳವೆಬಾವಿಗಳ ಪುನಶ್ಚೇತನಕ್ಕೆ ಹಾಗೂ ಮಳೆನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಹಾಗೂ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗುವುದು. ನಗರದ ಐ.ಜಿ. ರಸ್ತೆ, ಎಂ.ಜಿ. ರಸ್ತೆ ಹಾಗೂ ಹನುಮಂತಪ್ಪ ವೃತ್ತಗಳಲ್ಲಿ ವಾಣಿಜ್ಯ ಪರವಾನಗಿ ವಿತರಣಾ ಕೇಂದ್ರವನ್ನು ಸ್ಥಾಪಿಸಿ ತಕ್ಷಣ ಪರವಾನಗಿ ನೀಡಲು ಉದ್ದೇಶಿಸಿದೆ.
ನೈಟ್ ಪಾರ್ಕಿಂಗ್ ಫೀ: ನಗರದಲ್ಲಿರುವ ಲಾಡ್ಜ್ಗಳು, ಹೋಂ - ಸ್ಟೇಗಳು, ಅತಿಥಿ ಗೃಹಗಳ ಪರವಾನಗಿ ಶುಲ್ಕವನ್ನು ಪರಿಷ್ಕರಿಸುವುದರ ಜೊತೆಗೆ ಖಾಸಗಿ ವಾಹನಗಳು ರಾತ್ರಿ ವೇಳೆಯಲ್ಲಿ ರಸ್ತೆಗಳಲ್ಲಿಯೇ ತಂಗುತ್ತಿದ್ದು, ಈ ವಾಹನಗಳಿಗೆ ರಾತ್ರಿ ನಿಲ್ದಾಣ ಶುಲ್ಕ ವಿಧಿಸಲಾಗುವುದು.
ಆಹಾರ ಸುರಕ್ಷತಾ ಕ್ರಮ ನಿಟ್ಟಿನಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್ಗಳು, ಕ್ಯಾಂಟೀನ್ ಮತ್ತು ತಳ್ಳುವ ಗಾಡಿಗಳು, ಫಾಸ್ಟ್ ಫುಡ್ ಇತ್ಯಾದಿಗಳಲ್ಲಿ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಮೊದಲ ಬಾರಿಗೆ ಆಹಾರ ಸುರಕ್ಷತಾ ಕ್ರಮದ ಬಗ್ಗೆ ಅಗತ್ಯ ತರಬೇತಿಯನ್ನು ನೀಡಲು ಆಲೋಚಿಸಲಾಗಿದೆ. ನಗರದ ನೈರ್ಮಲ್ಯವನ್ನು ಪರಿಣಾಮಕಾರಿಯಾಗಿ ಕಾಪಾಡಲು ಶಾಲಾಮಕ್ಕಳಿಗೆ ಸಾರ್ವಜನಿಕರಿಗೆ ನೈರ್ಮಲ್ಯ ಅರಿವು ಕಾರ್ಯಕ್ರಮ ತಿಂಗಳಲ್ಲಿ 2 ಬಾರಿ ಹಮ್ಮಿಕೊಳ್ಳಲಾಗುವುದು.
ರು. 5 ಸಾವಿರ ದಂಡ: ನಗರದಲ್ಲಿರುವ ಖಾಲಿ ನಿವೇಶನಗಳ ಸ್ವಚ್ಛತೆ ದೃಷ್ಟಿಯಲ್ಲಿ ಸ್ವಚ್ಛತೆ ಇಲ್ಲದ ನಿವೇಶನಗಳಿಗೆ ಈಗಾಗಲೇ 5 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತಿದೆ. ನಿವೇಶನಗಳಾಗಿ 5 ವರ್ಷದ ನಂತರವೂ ಕಟ್ಟಡ ನಿರ್ಮಾಣ ಮಾಡದೇ ಇದ್ದಲ್ಲಿ ಕಂದಾಯವನ್ನು ಎರಡರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗುವ ಮನೆ ಮತ್ತು ವಾಣಿಜ್ಯ ಕಟ್ಟಡಗಳು 10 ಚದುರಗಳಿಗಿಂತ ಹೆಚ್ಚುವರಿ ನಿರ್ಮಾಣದ ಕಡೆಗಳಿಗೆ ಕಾರ್ ಪಾರ್ಕಿಂಗ್, ಸೋಲಾರ್ ವಾಟರ್ ಹೀಟರ್ ಮತ್ತು ಮಳೆ ನೀರು ಕೊಯ್ಲು ಪದ್ದತಿಯನ್ನು ನಗರಸಭೆಯಿಂದ ಏಪ್ರಿಲ್ 1 ರಿಂದ ಕಡ್ಡಾಯಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು. ಉಪಾಧ್ಯಕ್ಷೆ ಲಕ್ಷ್ಮಮ್ಮ, ಪೌರಾಯುಕ್ತ ಪ್ರಭಾಕರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.