21ಕ್ಕೆ ದೇವಾಲಯ ಲೋಕಾರ್ಪಣೆ
ಚಿಕ್ಕಮಗಳೂರು: ತಾಲೂಕಿನ ಹಂಪಾಪುರದಲ್ಲಿ ರು. 18 ಲಕ್ಷ ವೆಚ್ಚದಲ್ಲಿ ಹಂಪೆಯ ವಿರೂಪಾಕ್ಷೇಶ್ವರಸ್ವಾಮಿ ದೇವಾಲಯ ನಿರ್ಮಿಸಲಾಗಿದೆ. ಫೆ.21ರಂದು ಲೋಕಾರ್ಪಣೆಗೊಳ್ಳಲಿದೆ.
ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಗ್ರಾಮದ ಮುಖಂಡರಾದ ಎಚ್.ಎಸ್. ಪುಟ್ಟೇಗೌಡ ಅವರ ನೇತೃತ್ವದ ಸಮಿತಿ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ರು. 18 ಲಕ್ಷ ವೆಚ್ಚದಲ್ಲಿ ಹಿಂದೆ ದೇವಾಲಯವಿದ್ದ ಸ್ಥಳದಲ್ಲೇ ನೂತನ ದೇವಾಲಯ ನಿರ್ಮಿಸಿದ್ದಾರೆ. ಅದರ ಮೇಲೆ ಆರು ಅಡಿ ಎತ್ತರದ ಧ್ಯಾನಾಸಕ್ತ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಿದೆ.
ನವಗ್ರಹ ಪ್ರತಿಷ್ಠಾಪನೆ: ಮಧ್ಯಪ್ರದೇಶದ ನರ್ಮದಾ ನದಿ ತೀರದ ಓಂಕಾರೇಶ್ವರದಿಂದ ಬಾಣಲಿಂಗವನ್ನು ಗ್ರಾಮಕ್ಕೆ ತರಲಾಗಿದೆ. ಫೆ.21 ರಂದು ಅದರ ಪ್ರತಿಷ್ಠಾಪನೆ ಜರುಗಲಿದೆ. ವಿರೂಪಾಕ್ಷೇಶ್ವರ ಸ್ವಾಮಿಯ ಜೊತೆಗೆ ಮಹಾನಂದಿ, ಗಣಪತಿ ಮತ್ತು ನವಗ್ರಹಗಳ ಪ್ರತಿಷ್ಠಾಪನೆ ಸಹ ನಡೆಯಲಿದೆ.
ಅಂದು ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲೆ ಮಹಾಸಂಸ್ಥಾನದ ಈಶ್ವರಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಹಾಸನ ಜಿಲ್ಲೆಯ ಸಮರ್ಥ ರಾಮಾಶ್ರಮದ ರಾಮಅವಧೂತರು ಕುಂಭಾಭಿಷೇಕ ನೆರವೇರಿಸಲಿದ್ದಾರೆ.
ಧರ್ಮಸಭೆಯ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಮಧೇನು ಗಣಪತಿ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ, ಉದ್ಯಮಿ ಮೋದಾಲ ವೆಂಕಟರಾಮಯ್ಯ, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್, ತಾಪಂ ಅಧ್ಯಕ್ಷ ಬಸವರಾಜ್ ಭಾಗವಹಿಸಲಿದ್ದಾರೆ.