ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗೆ ಆರೋಗ್ಯ ತಪಾಸಣೆ
ನರಸಿಂಹರಾಜಪುರ: ಇಲ್ಲಿನ 108 ಆಂಬ್ಯುಲೆನ್ಸ್ ಆರೋಗ್ಯ ರಕ್ಷಾದ ವತಿಯಿಂದ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗೆ ಬಿಪಿ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ ಸಿಬ್ಬಂದಿ ಎಸ್. ಭೋಜನಾಯಕ್ ಮಾತನಾಡಿ, ಯಾವಾಗಲೂ ಒತ್ತಡದಿಂದ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪೊಲೀಸರು ನಿಯಮಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಕಾಲ, ಕಾಲಕ್ಕೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ತುರ್ತು ಸಂದರ್ಭಗಳಾದ ರಸ್ತೆ ಅಪಘಾತ, ಹೃದಯಾಘಾತ, ಹಾವು ಕಡಿತ ಮುಂತಾದ ಸಂದರ್ಭಗಳಲ್ಲಿ 108 ನಂಬರಿಗೆ ಕರೆ ಮಾಡಿದರೆ ತಕ್ಷಣ ನಾವು ಸ್ಥಳಕ್ಕೆ ಬಂದು ತುರ್ತು ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಸೇರಿಸುತ್ತೇವೆ. ಯಾವುದೇ ಕಾರಣಕ್ಕೂ ಸಣ್ಣ ಆರೋಗ್ಯದ ಸಮಸ್ಯೆಗೆ 108ಕ್ಕೆ ಕರೆ ಮಾಡಬೇಡಿ ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಠಾಣಾಧಿಕಾರಿ ತಿಮ್ಮರಾಜು, ಎಎಸ್‌ಐಗಳಾದ ಮಂಜುನಾಥ್, ಚಂದ್ರಶೇಖರ್, ಸಿಬ್ಬಂದಿಗಳಾದ ಲಕ್ಷ್ಮಿಕಾಂತರಾಜ ಅರಸು, ಚಂದ್ರಪ್ಪ, ರವಿ, ಜಗದೀಶ್, ತಿಪ್ಪೇಶ್, ಎಸ್. ಉಷಾ ಉಪಸ್ಥಿತರಿದ್ದರು.