ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯುತ್ ವಿತರಣಾ ಕೇಂದ್ರ ಚಾಲನೆಗೆ ಕ್ಷಣಗಣನೆ

Lingaraj Badiger
Updated On : 13 Feb 2013, 10:37 am

ನರಸಿಂಹರಾಜಪುರ: ಮೆಸ್ಕಾಂ ಕಚೇರಿ ಆವರಣದಲ್ಲಿ ಸುಮಾರು 11 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 33,11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದಲೂ ವಿದ್ಯುತ್ ಸಮಸ್ಯೆ ಕಾಡುತ್ತಿತ್ತು. ಓಲ್ಟೇಜ್ ಕಡಿಮೆ ಹಾಗೂ ಪದೇ ಪದೇ ವಿದ್ಯುತ್ ಕಡಿತದಿಂದ ಜನರು ರೋಸಿ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಮುತ್ತಿನಕೊಪ್ಪದಲ್ಲಿ 33,11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಪ್ರಾರಂಭಗೊಂಡಾಗ ತಾಲೂಕಿನ ಎಲ್ಲಾ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಮುತ್ತಿನಕೊಪ್ಪದಿಂದ ನರಸಿಂಹರಾಜಪುರಕ್ಕೆ 20 ಕೆಮಿ ದೂರವಿರುವುದರಿಂದ ಮಾರ್ಗ ಮಧ್ಯೆ ಗಿಡ,ಮರಗಳಿಂದ ವಿದ್ಯುತ್ ಓಲ್ಟೇಜ್ ಡ್ರಾಪ್ ಆಗಿ ನರಸಿಂಹರಾಜಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಸಿಗಲಿಲ್ಲ. ಇದನ್ನು ಮನಗಂಡ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರು ನರಸಿಂಹರಾಜಪುರ ಪಟ್ಟಣಕ್ಕೆ ಪ್ರತ್ಯೇಕವಾಗಿ 33, 11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರು ಮಾಡಿಸಿದ್ದರು. 2010 ರಲ್ಲಿ ಅಂದಿನ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಪರಿಹಾರಕ್ಕೆ ರೈತರ ಒತ್ತಾಯ: ಬಾಳೆಹೊನ್ನೂರಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಕೇಂದ್ರದ ಕಾಮಗಾರಿ 8 ತಿಂಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಆದರೆ, ಮುತ್ತಿನಕೊಪ್ಪದಿಂದ ನರಸಿಂಹರಾಜಪುರ ಮಾರ್ಗ ಮಧ್ಯೆ 33 ಕೆವಿ ಲೈನ್ ಕೆಳಗೆ ಮಡಬೂರು, ಬಾಳೆಕೊಪ್ಪ ಹಾಗೂ ಮೆಣಸೂರು ಸಮೀಪದಲ್ಲಿ ರೈತರು ರಬ್ಬರ್ ಹಾಗೂ ಇತರೆ ಗಿಡಗಳನ್ನು ಬೆಳೆಸಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರಿಂದ ಕಾಮಗಾರಿ ಉದ್ಘಾಟನೆಗೆ ತಡವಾಗಿತ್ತು. ಈಗ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಮಾತುಕತೆ ನಡೆಸಿದ್ದು ವಿದ್ಯುತ್ ಲೈನ್ ಕೆಳಗೆ ಬರುವ ರಬ್ಬರ್ ಗಿಡಗಳನ್ನು ತೆಗೆಯಲಾಗಿದೆ. ಈಗಾಗಲೇ ಮೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಸರಣಾ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫೆಬ್ರವರಿ 20 ರ ಒಳಗೆ ಉಸ್ತುವಾರಿ ಸಚಿವರ ವೇಳೆ ನೋಡಿಕೊಂಡು ಉದ್ಘಾಟಿಸಲಾಗುತ್ತದೆ. ಕೇಂದ್ರ ಪ್ರಾರಂಭವಾಗುವುದರಿಂದ ಮುತ್ತಿನಕೊಪ್ಪ ವಿತರಣಾ ಕೇಂದ್ರಕ್ಕೆ 4 ಮೆಗಾವ್ಯಾಟ್ ವಿದ್ಯುತ್ ಒತ್ತಡ ಕಡಿಮೆಯಾಗಲಿದೆ. ಇದರಿಂದ ಮುತ್ತಿನಕೊಪ್ಪ ಹಾಗೂ ನರಸಿಂಹರಾಜಪುರ ಪ್ರಸರಣಾ ಕೇಂದ್ರಗಳೆರಡರಲ್ಲೂ ಉತ್ತಮ ಗುಣ ಮಟ್ಟದ ವಿದ್ಯುತ್ ನಿರೀಕ್ಷಿಸಬಹುದು ಎಂದರು.
ಕುಡಿವ ನೀರಿನ ಯೋಜನೆಗೆ ಅನುಕೂಲ: ತಾಲೂಕಿನ ಹಂತುವಾನಿ, ವರ್ಕಾಟೆ, ಹೆನ್ನಂಗಿ, ಬೆಳ್ಳಂಗಿ ಮುಂತಾದ ಗ್ರಾಮಗಳಲ್ಲಿ ವಿದ್ಯುತ್ ಓಲ್ಟೇಜ್ ಕಡಿಮೆ ಇದ್ದು ಕುಡಿಯುವ ನೀರಿನ ಯೋಜನೆ ವಿಫಲವಾಗುತ್ತಿತ್ತು. ಇದರಿಂದ ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿದಿದ್ದರು. ಪ್ರಸ್ತುತ ನರಸಿಂಹರಾಜಪುರ ಪಟ್ಟಣದಲ್ಲಿ 33,11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆಗೊಂಡರೆ ಪಟ್ಟಣ ಹಾಗೂ ಬಹತೇಕ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಬಗಹರಿಯಲಿದೆ.
ಪಟ್ಟಣದಿಂದ ಕುದುರೆಗುಂಡಿ ಮಾರ್ಗದ ಗುಡ್ಡೇಹಳ್ಳದವರೆಗೂ ಇದೇ ಪ್ರಸರಣಾ ಕೇಂದ್ರದಿಂದ ವಿದ್ಯುತ್ ಹೋಗಲಿದ್ದು ವಿದ್ಯುತ್ ಓಲ್ಟೇಜ್ ಜಾಸ್ತಿಯಾಗಲಿದೆ. ಇದರಿಂದ ಈ ಪ್ರಸರಣಾ ವ್ಯಾಪ್ತಿಯ ಎಲ್ಲಾ ಗ್ರಾಪಂಗಳ ಕುಡಿಯುವ ನೀರಿನ ಯೋಜನೆಗೆ ಉತ್ತಮ ವಿದ್ಯುತ್ ಸಿಗಲಿದೆ.
ನಿರ್ವಹಣೆ ಸುಲಭ: ಮುತ್ತಿನಕೊಪ್ಪದಿಂದ ನರಸಿಂಹರಾಜಪುರಕ್ಕೆ 33,11 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಬಂದಿರುವುದರಿಂದ ಈ ವಿದ್ಯುತ್ ಲೈನ್ ಎರಡೂ ಕಡೆ 7.50 ಮೀಟರ್‌ನಂತೆ ಒಟ್ಟು 15 ಮೀಟರ್ ಜಾಗದಲ್ಲಿ ಯಾವುದೇ ಗಿಡ ಬೆಳೆಯುವಂತಿಲ್ಲ. 15 ಮೀಟರ್ ಜಾಗದಲ್ಲಿ ಈಗಾಗಲೇ ಲೈನ್ ಕ್ಲಿಯರ್ ಮಾಡಲಾಗಿದೆ. ಇದರಿಂದ ಇನ್ನು ಮುಂದೆ ಮಳೆಗಾಲದಲ್ಲಿ ನರಸಿಂಹರಾಜಪುರದವರೆಗೆ ವಿದ್ಯುತ್ ಲೈನ್ ಸಮಸ್ಯೆ ಕಡಿಮೆಯಾಗಿ ಲೈನ್ ಮೆನ್‌ಗೆ ನಿರ್ವಹಣೆ ಸುಲಭವಾಗಲಿದೆ.
ಈಗಾಗಲೇ ನೂತನ 33,11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ನೀಡಿ ಪರೀಕ್ಷೆ ನಡೆಸಲಾಗಿದೆ. ಎಲ್ಲವೂ ಓಕೆ ಆಗಿದೆ ಎನ್ನುತ್ತಾರೆ ನೂತನ 33,11 ಕೆವಿ ವಿದ್ಯುತ್ ಪ್ರಸರಣಾ ಕೇಂದ್ರದ ಕಾಮಗಾರಿಯ ವ್ಯವಸ್ಥಾಪಕ ಮಲ್ಲೇಶ್.
ರೈತರಿಗೆ ಅನುಕೂಲ: ನರಸಿಂಹರಾಜಪುರ ಪಟ್ಟಣದಲ್ಲಿ 33,11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಪ್ರಾರಂಭವಾಗುವುದರಿಂದ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿದೆ. ಅಲ್ಲಿ ವಿದ್ಯುತ್ ಇದ್ದರೂ ಓಲ್ಟೇಜ್ ಇಲ್ಲದೆ ಪಂಪ್ ಸೆಟ್ ಸ್ಟಾರ್ಟ್ ಆಗದೆ ರೈತರಿಗೆ ತೊಂದರೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಅವರ ಪ್ರಯತ್ನದಿಂದ  ಪಟ್ಟಣದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಪ್ರಾರಂಭವಾಗಿದೆ ಎಂದು ತಾಪಂ ಅಧ್ಯಕ್ಷ ಜೆ.ಜಿ.ನಾಗರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement