1ಕೋಟಿ ವೆಚ್ಚದಲ್ಲಿ ಸಮುದಾಯ ಭವನ
ಚಿಕ್ಕಮಗಳೂರು: ನಗರದಲ್ಲಿ ಒಂದು ಕೋಟಿ ರು. ವೆಚ್ಚದ ಸುಸಜ್ಜಿತವಾದ ಕೆಪಿಟಿಸಿಎಲ್ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರದಲ್ಲೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಸಮಿತಿ ಉಪಾಧ್ಯಕ್ಷ ಶಫಿವುಲ್ಲಾ ಹೇಳಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ಗುರುಮೂರ್ತಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಶಫಿವುಲ್ಲಾ ರವರಿಗೆ ಶುಕ್ರವಾರ ಮೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರತ್ನಗಿರಿ ರಸ್ತೆಯ ಭುವನೇಂದ್ರ ಶಾಲೆ ಎದುರಿನ ನೌಕರರ ವಸತಿ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮೆಸ್ಕಾಂ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ. ಈ ಸಂಬಂಧ ಭವನ ನಿರ್ಮಾಣಕ್ಕೆ ಕೇಂದ್ರ ಸಮಿತಿ ಒಂದು ಕೋಟಿ ರು. ಮೀಸಲಿಟ್ಟಿದ್ದು ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದರು.
ಕೇಂದ್ರ ಸಮಿತಿ ಸದಸ್ಯ ಎಂ. ರಾಜೇಗೌಡ ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು.
ಕೆಲಸ ಕಾರ್ಯಗಳು ಸುಗಮ: ನೌಕರರ ಮುಂಬಡ್ತಿ, ಜೇಷ್ಠತಾಪತ್ರ ಸೇರಿದಂತೆ ಯಾವುದೆ ವೈಯುಕ್ತಿಕ ಸೌಲಭ್ಯ ಮತ್ತು ಕಚೇರಿ ಕೆಲಸಗಳಿಗೆ ಮಂಗಳೂರಿಗೆ ತೆರಳಿ ಸಮಯ ವ್ಯರ್ಥ ಮಾಡಬೇಕಿತ್ತು. ನಮ್ಮ ವೃತ್ತದವರೇ ಉಪಾಧ್ಯಕ್ಷರಾಗಿರುವುದರಿಂದ ಕೆಲಸ ಕಾರ್ಯಗಳು ಸುಗಮವಾಗಲು ಸಹಕಾರಿಯಾಗಲಿದೆ ಎಂದರು. ಸೊಸೈಟಿ ಉಪಾಧ್ಯಕ್ಷ ಎ.ವಿ. ಅನಂತರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ನಂಜೇಗೌಡ, ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ಲೋಕೇಶ್, ಸಹ ಕಾರ್ಯದರ್ಶಿ ಮಂಜುನಾಥ್, ಅಧಿಕಾರಿಗಳಾದ ದೇವರಾಜ್ ಹಾಜರಿದ್ದರು.