ಪಡಿತರ ಅವ್ಯವಸ್ಥೆ ಸರಿಪಡಿಸಲು ಒತ್ತಾಯ
ಮೂಡಿಗೆರೆ: ತಾಲೂಕಿನಲ್ಲಿ ನಡೆಯುತ್ತಿರುವ ಪಡಿತರ ವಿತರಣೆಯ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಘೋಷಣೆ ಕೂಗಿ ತಹಸೀಲ್ದಾರ್ ಜಿ.ಎಸ್. ಸೈಯದ್ ಮನಿರ್ ಅವರಿಗೆ ಮನವಿ ಅರ್ಪಿಸಿದರು.
ನಂತರ ಯೂತ್ ಕಾಂಗ್ರೆಸ್ ಅಧ್ಯಕ್ಷ ಅರೇನಹಳ್ಳಿ ಪ್ರಕಾಶ್ ಮಾತನಾಡಿ, ಆಹಾರ ಇಲಾಖೆಯಲ್ಲಿ ನಿಗದಿತ ಸಮಯಕ್ಕೆ ಇಂಡೆಂಟ್ ಹಾಕದೇ ಇರುವ ಕಾರಣ ಸಮಯಕ್ಕೆ ಸರಿಯಾಗಿ ದವಸ ಧಾನ್ಯ ಬರುತ್ತಿಲ್ಲ. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವಂಚನೆ ಮಾಡಲಾಗುತ್ತಿದ್ದು, ಅಹಾರ ಪದಾರ್ಥಗಳನ್ನು ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳಿದ್ದು. ತಕ್ಷಣವೇ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ತಾಲೂಕಿನಾದ್ಯಂತ ಸಮಸ್ಯೆ: ಪಡಿತರ ಚೀಟಿ ವಿತರಣೆಯಲ್ಲಿ ತಾಲೂಕಿನಾದ್ಯಂತ ಸಮಸ್ಯೆ ಉಂಟಾಗಿದ್ದು, ಅರ್ಹ ಫಲಾನುಭವಿಗಳಿಗೆ ಬಿಪಿಲ್ ಪಡಿತರ ಚೀಟಿ ವಿತರಿಸದೇ, ವಂಚಿಸಲಾಗಿದೆ. ಇದರಿಂದ ನಿಜವಾದ ಬಡವರು ಎಪಿಎಲ್ ಪಡೆದು ಆಹಾರ ಪದಾರ್ಥ ಪಡೆಯದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯ ವೇಳಾ ಪಟ್ಟಿಯನ್ನು. ತಾಲೂಕು ಕಚೇರಿ ಆಹಾರ ಶಾಖೆಗಳಲ್ಲಿ ಪ್ರಕಟಿಸಬೇಕು. ಪ್ರತಿ ತಿಂಗಳು ಪಡಿತರ ವಿತರಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಿ, ವಿತರಣೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಪದಾಧಿಕರಿಗಳಾದ ಬಿಳಗುಳ ಸಂಪತ್, ಸುಬ್ರಹ್ಮಣ್ಯ, ಸಂಪತ್, ಪುಟ್ಟಸ್ವಾಮೇಗೌಡ, ನಿಶಾಂತ್ ಪಾಟೇಲ್ ಇದ್ದರು.