ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೇತ್ರದ ಅಭಿವೃದ್ಧಿ ತೃಪ್ತಿ ತಂದಿದೆ: ಜೀವರಾಜ್

Lingaraj Badiger
Updated On : 18 Feb 2013, 11:03 am

ನರಸಿಂಹರಾಜಪುರ: ಶಾಸಕನಾದ ಅವದಿಯಲ್ಲಿ ಕಾನೂರು ಗ್ರಾಪಂಗೆ ಶಾಸಕರ ನಿಧಿಯಿಂದ 10 ರಿಂದ 12 ಕೋಟಿ ರುಪಾಯಿ ಅನುದಾನ ನೀಡಿದ್ದೇನೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಕಟ್ಟಿನಮನೆ ಶಾಲಾ ಆವರಣದಲ್ಲಿ ನಡೆದ ಕಾನೂರು ಗ್ರಾಪಂ ವ್ಯಾಪ್ತಿಯ ಆಹಾರ ಪಡಿತರ ಚೀಟಿ ವಿತರಣೆ, 8.50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾನು ಶಾಸಕನಾಗುವ ಮೊದಲು ತಾಲೂಕಿನಲ್ಲಿ ಆಡುವಳ್ಳಿ ಹಾಗೂ ಕಾನೂರು ಗ್ರಾಪಂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿತ್ತು. ಈಗ ಚಿತ್ರ ಬದಲಾಗಿದೆ. ತಾಲೂಕಿನಲ್ಲೇ ಅಭಿವೃದ್ಧಿ ಕಂಡ ಗ್ರಾಪಂ ಪಟ್ಟಿಗೆ ಸೇರಿದೆ ಎಂದು ತಿಳಿಸಿದರು.
ಕೇಂದ್ರದಿಂದ ಅನ್ಯಾಯ: ತಾಲೂಕಿನ ಹಲವು ರಸ್ತೆಗಳನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜವಹಾರ್ ರೋಜಗಾರ್ ಗ್ರಾಮ ಸಡಕ್ ಯೋಜನೆಯಲ್ಲಿ ಸೇರಿಸಲಾಗಿತ್ತು. ಆದರೆ, 8 ನೇ ಹಂತದ ನಂತರ ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕಳೆದ 5 ವರ್ಷದಿಂದ ಗ್ರಾಮ ಸಡಕ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬಿಡುಗಡೆಯಾಗಿಲ್ಲ. ಇದರಿಂದ ದೇಶದ ಒಕ್ಕೂಟದ ವ್ಯವಸ್ಥೆಗೆ ದಕ್ಕೆಯಾಗುತ್ತದೆ. ರಾಜಸ್ತಾನ ರಾಜ್ಯಕ್ಕೆ 15 ನೇ ಹಂತದ ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಈ ಬಗ್ಗೆ ನಿಯೋಗ ಹೋಗಿದ್ದೆವು. ಕೇಂದ್ರ ಸಚಿವರು ಕೊಟ್ಟ ಉತ್ತರ ನಮಗೆ ತೃಪ್ತಿ ತಂದಿಲ್ಲ. ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂದೆ ಬಂದಿದೆ. ರಸ್ತೆ ಅಭಿವೃದ್ಧಿ ಕಂಡಿದೆ. ಆದ್ದರಿಂದ ಗ್ರಾಮ ಸಡಕ್ ಯೋಜನೆಯಲ್ಲಿ ಹಣ ಬಿಡುಗಡೆ ಮಾಡಲು ಸಾದ್ಯವಿಲ್ಲ ಎಂಬ ಉತ್ತರ ಸಿಕ್ಕಿತು. ಇದರಿಂದಾಗಿ ತಾಲೂಕಿನ ಜೋಗಿಮಕ್ಕಿ ರಸ್ತೆ, ಮೆಣಸೂರು ಗ್ರಾಪಂನ ಸೌತಿಕೆರೆ ರಸ್ತೆ ಸೇರಿದಂತೆ 6 ರಸ್ತೆಗಳು ನೆನಗುದಿಗೆ ಬಿದ್ದಿದೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಶೃಂಗೇರಿ ಕ್ಷೇತ್ರದ ಅಭಿವೃದ್ಧಿ: ತಾನು ಶಾಸಕನಾದ ಮೇಲೆ ಯಾರೂ ಮಾಡದಷ್ಟು ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಪಾಲಿಟೆಕ್ನಿಕ್ ಕಾಲೇಜು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಐಟಿಐ ಕಾಲೇಜು ಮಂಜೂರಾಗಿದೆ. 2 ಮೊರಾರ್ಜಿ ಶಾಲೆ, 2 ಸರ್ಕಾರಿ ಜೂನಿಯರ್ ಕಾಲೇಜು, ಶೃಂಗೇರಿಗೆ ಪ್ರಥಮ ದರ್ಜೆ ಕಾಲೇಜು, 3 ಹೆಣ್ಣು ಮಕ್ಕಳ ಹಾಸ್ಟೆಲ್ ಮಂಜೂರು ಮಾಡಿಸಿದ್ದೇನೆ. ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಬಗ್ಗೆ ಹೆಮ್ಮೆ ಇದೆ. ರಸ್ತೆಯ ಗುಣಮಟ್ಟದ ಬಗ್ಗೆ ಕ್ಷೇತ್ರದ ನಾಯಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ನಕಲಿ ಪಡಿತರ ಚೀಟಿ ಪತ್ತೆ: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವನಾದ ನಂತರ ಮೊದಲ ಬಾರಿಗೆ ಇಲಾಖೆಯ ವರದಿ ಪರಿಶೀಲನೆ ಮಾಡಿದಾಗ ನಕಲಿ ಪಡಿತರ ಚೀಟಿ ಇರುವುದು ಗಮನಕ್ಕೆ ಬಂತು. 2011 ಜನಗಣತಿ ಪ್ರಕಾರ ರಾಜ್ಯದಲ್ಲಿ 1 ಕೋಟಿ 37 ಲಕ್ಷ ಕುಟಂಭಗಳಿದ್ದವು. ಆದರೆ, 1 ಕೋಟಿ 72 ಲಕ್ಷ ಪಡಿತರ ಚೀಟಿ ಇತ್ತು. ನಕಲಿ ಪಡಿತರ ಚೀಟಿ ಪತ್ತೆ ಹಚ್ಚಲು ಎಲ್ಲಾ ರೇಷನ್ ಕಾರ್ಡುದಾರರಿಗೆ ಹೆಬ್ಬೆಟ್ಟು ಕೊಡಲು ಆದೇಶ ನೀಡಿದೆ. ಆಗ 33 ಲಕ್ಷ ಜನರು ಬರಲಿಲ್ಲ. 1 ಕೋಟಿ 38 ಲಕ್ಷ ಕಾರ್ಡುಗಳು ಮಾತ್ರ ಉಳಿದಿದ್ದವು. 44 ಲಕ್ಷ 71 ಸಾವಿರ ಕಾರ್ಡುಗಳನ್ನು ವಜಾ ಮಾಡಿದೆವು. ಇದರಿಂದ ತಿಂಗಳಿಗೆ 40 ಕೋಟಿ ರುಪಾಯಿ ಮೌಲ್ಯದ ಅಕ್ಕಿ, ಸೀಮೆ ಎಣ್ಣೆ ಉಳಿತಾಯವಾಗಿದೆ. ವಾರ್ಷಿಕ 500 ಕೋಟಿ ರುಪಾಯಿ ಇಲಾಖೆಗೆ ಉಳಿತಾಯವಾಗಿದೆ. ಈಗ ಎಲ್ಲರಿಗೂ ಖಾಯಂ ಪಡಿತರ ಚೀಟಿ ಕೊಡಲಾಗುತ್ತಿದೆ. ಶೃಂಗೇರಿ ಕ್ಷೇತ್ರದಲ್ಲಿ 8 ಸಾವಿರದ 400 ತಾತ್ಕಾಲಿಕ ಬಿಪಿಎಲ್ ಕಾರ್ಡುಗಳು ಇದ್ದರೂ ಖಾಯಂ ಕಾರ್ಡು ಕೊಟ್ಟಿರಲಿಲ್ಲ. ಇದರಿಂದ ಅವರಿಗೆ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯಗಳು ಸಿಕ್ಕುತ್ತಿರಲಿಲ್ಲ. ಈಗ 7 ಸಾವಿರದ 800 ಬಿಪಿಎಲ್ ಕಾರ್ಡುಗಳನ್ನು ಖಾಯಂ ಕಾರ್ಡುಗಳನ್ನು ನೀಡಿದ್ದೇವೆ ಎಂದು ಅವರು ತಿಳಿಸಿದರು.
ಮಾನಸಿಕವಾಗಿ ಸಿದ್ಧರಾಗಿ: ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ನೀಡಬೇಕು ಎಂದು ಬಯೋವುಟ್ರಿಕ್ ಪದ್ಧತಿ ಜಾರಿಗೆ ತರಲಾಗಿದೆ. ಆದರೆ, ಈ ಹಿಂದೆ ನ್ಯಾಯ ಬೆಲೆ ಅಂಗಡಿಗಳನ್ನು ಜನರಿಗೆ ಮೋಸ ಮಾಡುತ್ತಿದ್ದ ಕೆಲವರು ಈ ಯೋಜನೆಯನ್ನು ಜಾರಿಗೆ ತರದಂತೆ ತಡೆ ಒಡ್ಡುತ್ತಿದ್ದಾರೆ. ಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶೃಂಗೇರಿ ಕ್ಷೇತ್ರದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳು ಮಾನಸಿಕವಾಗಿ ಬಯೋ ಮೆಟ್ರಿಕ್ ಪದ್ಧತಿಗೆ ಸಿದ್ಧರಾಗಬೇಕಾಗಿದೆ. ನ್ಯಾಯ ಬೆಲೆ ಅಂಗಡಿಗಳಿಗೆ ಪಡಿತರ ವ್ಯವಸ್ಥೆಗೆ ಕಮೀಷನ್ ಜಾಸ್ತಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ನ್ಯಾಯವಾದ ಫಲಾನುಭವಿಗಳಿಗೆ ಅಕ್ಕಿ, ಸೀಮೆ ಎಣ್ಣೆ ಸರಿಯಾದ ರೀತಿಯಲ್ಲಿ ಕೊಡಲೇ ಬೇಕು. ಕೊಡದೆ ಇದ್ದರೆ ಮುಂದಿನ ದಿನಗಳಲ್ಲಿ ಆ ನ್ಯಾಯ ಬೆಲೆ ಅಂಗಡಿಗಳನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಉತ್ತಮ ಬಜೆಟ್: ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉತ್ತಮ ಬಜೆಟ್ ನೀಡಿದ್ದಾರೆ. ಶಿಕ್ಷ್ಣಣ ಕ್ಷೇತ್ರಕ್ಕೆ 18,666 ಕೋಟಿ ರುಪಾಯಿ ನೀಡಲಾಗಿದೆ. ವಿಧವಾ ವೇತನವನ್ನು 500 ರುಪಾಯಿಗೆ ಏರಿಸಲಾಗಿದೆ. ಸಂದ್ಯ ಸುರಕ್ಷಾ ಯೋಜನೆಯಡಿ 70 ವರ್ಷ ದಾಟಿದವರಿಗೆ 750 ರುಪಾಯಿ ನೀಡಲಾಗುತ್ತದೆ. ಸಮಾಜದ ಎಲ್ಲಾ ವರ್ಗದವರಿಗೂ ಸಮಾನವಾಗಿ ನ್ಯಾಯ ನೀಡುವ ಪ್ರಯತ್ನ ಮಾಡಿದ್ದಾರೆ ಎಂದರು.
 ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಉಪಾಧ್ಯಕ್ಷೆ ಬಿ. ಸುಮಿತ್ರ, ದಿನೇಶ್, ಮಲ್ಲಿಕಾ ನವೀನ್, ನಾರಾಯಣಸ್ವಾಮಿ,  ಗಣೇಶ್, ರಾಮದಾಸ್, ಶಂಕರನಾರಾಯಣ, ಚಂದ್ರಶೇಖರ್, ರತ್ನಾಕರ್, ಆರ್. ರಂಜಿತ, ಎಸ್. ತಮ್ಮಯ್ಯ, ಸಂದೇಶ್, ಜಯ,  ನಾಗೇಶ್, ಕೆ. ವೀಣಾ, ಸಂದ್ಯಾ, ನಾಗರಾಜ್, ಮಂಜುನಾಥ್, ಭಾರತಿ, ತಹಸೀಲ್ದಾರ್ ಕೃಷ್ಣಮೂರ್ತಿ ಇದ್ದರು. ಇದೇ ಸಂದರ್ಭದಲ್ಲಿ ಸಚಿವರು ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ವಿತರಿಸಿದರು. ದಾನಿಗಳು ನೀಡಿದ ಪ್ರತಿಭಾ ಪುರಸ್ಕಾರವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವರು ವಿತರಿಸಿದರು. ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿದರು. ರಾಮದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement