ಚುನಾವಣಾಧಿಕಾರಿಗಳ ನೇಮಕ
ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯ 35 ವಾರ್ಡ್ಗಳಿಗೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ವಾರ್ಡ್ 1 ರಿಂದ 7ರವರೆಗೆ ಚುನಾವಣಾಧಿಕಾರಿಯಾಗಿ ಜಿಲ್ಲಾ ಹಿಂದುಳಿದ ಕಲ್ಯಾಣಾ ಇಲಾಖೆ ಅಧಿಕಾರಿಯವರನ್ನು ನೇಮಿಸಲಾಗಿದೆ. ಈ 7 ವಾರ್ಡ್ಗಳ ನಾಮಪತ್ರಗಳ ಸ್ವೀಕಾರ, ಪರಿಶೀಲನಾ ಕಾರ್ಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಯಲ್ಲಿ ನಡೆಯಲಿದೆ.
ವಾರ್ಡ್ 15 ರಿಂದ 21 ರವರೆಗೆ ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರನ್ನು ನೇಮಿಸಲಾಗಿದೆ. ನಾಮಪತ್ರಗಳ ಸ್ವೀಕಾರ, ಇಲ್ಲಿನ ಶ್ರೀ ಬೋಳರಾಮೇಶ್ವರ ದೇವಾಲಯದ ಸಮೀಪದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ನಡೆಯಲಿದೆ.
ವಾರ್ಡ್ 29 ರಿಂದ 35 ರವರೆಗೆ ಚುನಾವಣಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿಗಳನ್ನು ನೇಮಿಸಲಾಗಿದೆ. ಈ ವಾರ್ಡ್ಗಳಿಂದ ಸ್ಪರ್ಧೆ ಮಾಡುವವರು ಈ ಕಚೇರಿಯಲ್ಲಿ ಸಲ್ಲಿಸಬಹುದು.
ನಾಮಪತ್ರ ಸಲ್ಲಿಸುವವರ ಗಮನಕ್ಕೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯವಲ್ಲಿ ಸ್ಪರ್ಧೆ ಮಾಡುವವರ ಗಮನಕ್ಕೆ.
ನೀವು ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಾದರೆ ಸೂಚಕರಾಗಿ ಒಬ್ಬರು ಸಹಿ ಮಾಡಬೇಕು. ಪಕ್ಷೇತರರಾಗಿ ಸ್ಪರ್ಧೆ ಮಾಡುವವರಿಗೆ ನಗರಸಭೆಗೆ ಐದು, ಪುರಸಭೆಗೆ ನಾಲ್ಕು, ಪಟ್ಟಣ ಪಂಚಾಯ್ತಿಗೆ ಮೂರು ಮಂದಿ ಸೂಚಕರಾಗಿ ಸಹಿ ಮಾಡಬೇಕು.
ಪ್ರತಿ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಈ ಷರತ್ತು ನಾಲ್ಕು ನಾಮಪತ್ರಗಳನ್ನು ಮೀರುವಂತ್ತಿಲ್ಲ.
ಚುನಾವಣಾ ಕ್ಷೇತ್ರವು ಹಿಂದುಳಿದ ವರ್ಗ (ಎ), (ಬಿ), ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಅಥವಾ ಮಹಿಳೆಯರಿಗಾಗಿ ಮೀಸಲಾಗಿದ್ದರೆ ಅಭ್ಯರ್ಥಿಯು ನಾಮಪತ್ರವನ್ನು ಯಾವ ಜಾತಿ, ಪಂಗಡ, ವರ್ಗಕ್ಕೆ ಸೇರಿದವರು ಎನ್ನುವ ಬಗ್ಗೆ ಘೋಷಣೆಯನ್ನು ಒಳಗೊಂಡಿರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ನಾಮಪತ್ರದೊಂದಿಗೆ ಠೇವಣಿ ಸಂದಾಯದ ರಸೀದಿಯನ್ನು ಹಾಗೂ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದಲ್ಲಿ ನಮೂನೆ- ಬಿ ಮತ್ತು ಮಾನ್ಯತೆ ಪಡೆಯದ ನೊಂದಾಯಿತ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದಲ್ಲಿ ನಮೂನೆ- ಡಿ ಮತ್ತು ಅಫಿಡವಿಟ್ಗಳನ್ನು ಸಲ್ಲಿಸಬೇಕು.
ನಾಮಪತ್ರವನ್ನು ಸಲ್ಲಿಸುವ ಅಭ್ಯರ್ಥಿಯು ಸೇರಿದಂತೆ ಒಟ್ಟು 5 ಜನರು ಮಾತ್ರ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಬೇಕು.
ನಾಮಪತ್ರ ಸಲ್ಲಿಸಿದ ಬಳಿಕ ಸ್ವೀಕೃತಿಯನ್ನು ಪಡೆಯಬೇಕು.
ನಗರಸಭೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವವರು 2000 ಠೇವಣಿ ಕಟ್ಟಬೇಕು. ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಮಹಿಳೆಯಾಗಿದ್ದರೆ 1000 ಸಂದಾಯ ಮಾಡಬೇಕು. ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಲು 1000, ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಮಹಿಳೆಯರು 500 ಸಂದಾಯ ಮಾಡಬೇಕು.
ಈ ಠೇವಣಿಯನ್ನು ನಾಮಪತ್ರ ಸಲ್ಲಿಸುವ ಸ್ಥಳದಲ್ಲಿ ನಗದು ರೂಪದಲ್ಲಿ ಅಥವಾ ಸರ್ಕಾರಿ ಖಜಾನೆಯಲ್ಲಿ ಪಾವತಿ ಮಾಡಿ ರಶೀದಿಯನ್ನು ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಒಂದೇ ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚಿನ ನಾಮಪತ್ರಗಳನ್ನು ಸಲ್ಲಿಸಿದ್ದರೆ ಅಂತಹವರಿಂದ ಒಂದಕ್ಕಿಂತ ಹೆಚ್ಚಿನ ಠೇವಣಿ ಅಗತ್ಯವಿಲ್ಲ.
ಮದ್ಯ ಮುಕ್ತ ಚುನಾವಣೆಗೆ ಕಂಟ್ರೋಲ್ ರೂಂ: ಮಾರ್ಚ್ 7ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಧ್ಯ ಮುಕ್ತ ಚುನಾವಣೆ ನಡೆಸುವ ದಿಸೆಯಿಂದ ಮುಂಜಾಗ್ರತವಾಗಿ ಜಿಲ್ಲೆ ಎಲ್ಲಾ ತಾಲೂಕುಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.
ಸಾರ್ವಜನಿಕರು ಅಕ್ರಮ ಮದ್ಯ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟದ ಬಗ್ಗೆ ಯಾವುದೇ ದೂರುಗಳಿದಲ್ಲಿ ಚಿಕ್ಕಮಗಳೂರು ತಾಲೂಕು- 08262 221269, 229029, ಕಡೂರು- 08267 214746, ತರೀಕೆರೆ- 08261 223970, ಮೂಡಿಗೆರೆ- 08262 222075 , ಕೊಪ್ಪ- 08265 222628 ಹಾಗೂ ಎನ್.ಆರ್.ಪುರ- 08266- 220439ನ ಕಂಟ್ರೋಲ್ ರೂಂಗೆ ಮಾಹಿತಿ ನೀಡಲು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.