ನೀರಾವರಿ ಹೋರಾಟಕ್ಕೆ ಮಾರ್ಗದರ್ಶನ ನೀಡಿ
ಕಡೂರು: ಐದು ನದಿ ಹರಿಯುತ್ತಿದ್ದರೂ, ಜಿಲ್ಲೆಗೆ ಯಾವುದೇ ಪ್ರಯೋಜನವಾಗದೇ ಇದ್ದು, ಬರಗಾಲದಿಂದ ತತ್ತರಿಸುತ್ತಿರುವ ಕಡೂರು ತಾಲೂಕಿನ ಈ ಭಾಗಕ್ಕೆ ಭದ್ರಾ ನದಿಯಿಂದ ಶಾಶ್ವತ ನೀರಾವರಿ ತರುವ ಪಕ್ಷಾತೀತ ಹೋರಾಟಕ್ಕೆ ರಂಭಾಪುರಿ ಶ್ರೀಗಳ ಮಾರ್ಗದರ್ಶನ ಬೇಕು ಎಂದು ವಿಪ ಮಾಜಿ ಸದಸ್ಯ ವೈ.ಎಸ್.ವಿ. ದತ್ತ ಕೋರಿದರು.
ಅವರು ಕಡೂರು ತಾಲೂಕು ಯಗಟಿ ಹೋಬಳಿಯ ಪಿ. ಕೋಡೀಹಳ್ಳಿ ಗ್ರಾಮದ ಶ್ರೀಮರಡಿ ಬೀರಲಿಂಗೇಶ್ವರ ದೇವಾಲಯದ ಪ್ರವೇಶೋತ್ಸವ ಹಾಗೂ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.
ನೀರಿಲ್ಲದ ಸ್ಥಿತಿ: ಹಾಲುಮತ ಸಮುದಾಯದ ಕುಲಗುರು ಶ್ರೀಗುರು ರೇವಣಸಿದ್ದರನ್ನು ಆರಾಧಿಸಿಕೊಂಡು ರಂಭಾಪುರಿ ಪೀಠಕ್ಕೆ ನಡೆದುಕೊಳ್ಳುತ್ತಿದೆ. ಕಡೂರು ತಾಲೂಕು ಬರಗಾಲದ ಬೇಗೆಯಲ್ಲಿ ಬೇಯುತ್ತಿದ್ದು, 400 ಅಡಿವರೆಗೆ ಕೊರೆದರೂ ನೀರು ಸಿಗದ ಸ್ಥಿತಿ ತಲೆದೋರಿದೆ ಎಂದರು.
ದಿ. ಕೆ.ಎಂ. ಕೃಷ್ಣಮೂರ್ತಿಯವರು ಕ್ಷೇತ್ರದ ಶಾಸಕರಾಗಿ ಹಲವಾರು ಹೋರಾಟ ಮಾಡುವ ಮೂಲಕ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ. ಭದ್ರಾ ನದಿಯಿಂದ ಈ ಭಾಗದ ಚೌಳಹಿರಿಯೂರು, ಯಗಟಿ, ಹಿರೇನಲ್ಲೂರು ಸೇರಿದಂತೆ ಕಡೂರು ತಾಲೂಕಿನ ಹಲವು ಪ್ರದೇಶಗಳಿಗೆ ಶಾಶ್ವತ ನೀರು ಹರಿಸುವ ಯೋಜನೆಗೆ ಹಿಂದಿನ ಮುಖ್ಯಮಂತ್ರಿಗಳ ಬಳಿ ರೈತರೊಂದಿಗೆ ಹೋರಾಟ ಮಾಡಿ ಯೋಜನೆಯನ್ನು ಒಂದು ಹಂತಕ್ಕೆ ತಂದಿದ್ದೇವೆ ಎಂದರು.
ಪಕ್ಷಾತೀತ ಹೋರಾಟ: ಬರಪೀಡಿತ ಪ್ರದೇಶಗಳಿಗೆ ನೀರು ಹರಿಸುವ ಈ ಯೋಜನೆಯು ಕೇವಲ ರೈತರ ಪರವಾದ ಪಕ್ಷಾತೀತ ಹೋರಾಟವಾಗಿದೆ. ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ಶ್ರೀಗಳು ಈ ಹೋರಾಟಕ್ಕೆ ಮಾರ್ಗದರ್ಶಕರಾದಲ್ಲಿ ನಾವು ಯಶಸ್ವಿಯಾಗಲಿದ್ದು, ಶ್ರೀಗಳು ಕೃಪೆ ತೋರಬೇಕು ಎಂದು ಕೋರಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ರೇಣುಕ ವೀರಸೋಮೇಶ್ವರ ಶ್ರೀ ಆಶೀರ್ವಚನ ನೀಡಿ, ಜಾತಿ ಜಾತಿಗಳ ಸಂಘರ್ಷ ಒಳ್ಳೆಯದಲ್ಲ. ಮಲೆನಾಡು ಎಂದಾಕ್ಷಣ ಸಂಪದ್ಭರಿತ ಎಂದು ಭಾವನೆ ಇದೆ. ಆದರೆ ಈ ಭಾಗ ಬರಗಾಲದಿಂದ ತತ್ತರಿಸುತ್ತಿದ್ದು, ಹೋರಾಟದ ಮೂಲಕ ಸಮೃದ್ಧಿಗೊಳಿಸಬೇಕು ಎಂದರು.
ಸಮಾರಂಭದಲ್ಲಿ ಹಣ್ಣೆಮಠದ ಶಿವಾನಂದ ಶಿವಾಚಾರ್ಯ ಶ್ರೀ, ಹುಣಸಘಟ್ದದ ಗುರುಮೂರ್ತಿ ಶಿವಾಚಾರ್ಯ ಶ್ರೀ, ಬೀರೂರಿನ ರಂಭಾಪುರಿ ಶಾಖಾಮಠದ ರುದ್ರಮುನಿ ಶ್ರೀ, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಜಿಪಂ ಸದಸ್ಯೆ ಚಿಕ್ಕಮ್ಮ, ತಾಪಂ ಉಪಾಧ್ಯಕ್ಷೆ ಶೋಭಾ, ಮುಖಂಡ ಸೀಗೇಹಡ್ಲು ಹರೀಶ್, ಕೆ. ಓಂಕಾರಪ್ಪ, ಕೆ. ಶಾಂತಪ್ಪ, ಎಚ್.ಎಂ. ಲೋಕೇಶ್, ಅಶ್ವಿನಿ, ರವಿ, ಶಾಂತಪ್ಪ, ಗೋವಿಂದಪ್ಪ, ಕೆಜಿ ಲೋಕೇಶ್ ಉಪಸ್ಥಿತರಿದ್ದರು.