ಮಕ್ಕಳ ಪ್ರಗತಿಗೆ ಎಲ್ಲರೂ ಶ್ರಮ ಪಡುವುದು ಅಗತ್ಯ
ತರೀಕೆರೆ: ಸಮೀಪದ ಹುಣಸಘಟ್ಟದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶಾಲಾ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು.
ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಬೋಧಕರಿದ್ದು, ಗುಣಮಟ್ಟದ ಶಿಕ್ಷಣ ಕೊಡಲು ಮುಂದಾಗುತ್ತಿದ್ದಾರೆ. ಎರಡು ತಿಂಗಳಿಗೊಮ್ಮೆ ಪೋಷಕರ ಸಭೆ ಕರೆಯಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಯಾವುದೇ ಅನುದಾನ ಬಂದರೂ ಪ್ರಾಮಾಣಿಕವಾಗಿ ಕೆಲಸ ಪೂರೈಸುತ್ತೇವೆ ಹಾಗೂ ಮಕ್ಕಳ ಪ್ರಗತಿಗೆ ಎಲ್ಲರೂ ಶ್ರಮ ಪಡೋಣ ಎಂದು ತಿಳಿಸಿದರು.
ಪ್ರೋತ್ಸಾಹ ಅಗತ್ಯ: ಹುಣಸಘಟ್ಟ ಹಾಲುಸ್ವಾಮಿ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ ಮಾತನಾಡಿ, ಶಾಲೆ ಮತ್ತು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅನುರಾಧ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲೆ ಸ್ವಚ್ಛತೆಯಿಂದ ಕೂಡಿದ್ದು, ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ಮಾತನಾಡಿದರು.
ಜಿಪಂ ಸದಸ್ಯೆ ವಿಶಾಲ ತಿಪ್ಪೇಶಪ್ಪ, ತಾಪಂ ಸದಸ್ಯೆ ರೇಖಾ ಜಯ್ಯಣ್ಣ, ಗ್ರಾಪಂ ಅಧ್ಯಕ್ಷರು ಗೌರಮ್ಮ, ಚಂದ್ರಶೇಖರ್, ಗ್ರಾಪಂ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಭಾಗವಹಿಸಿದ್ದರು.
ಶಾಲೆ ಮುಖ್ಯ ಶಿಕ್ಷಕ ಎಚ್.ಡಿ. ಓಂಕಾರಪ್ಪ ಸ್ವಾಗತಿಸಿದರು. ಡಿ.ಮಲ್ಲಪ್ಪ ವರದಿ ವಾಚಿಸಿದರು. ಲೋಕೇಶಪ್ಪ ನಿರೂಪಿಸಿದರು. ಗೋವಿಂದರಾಜು ವಂದಿಸಿದರು.