ಸ್ಥಳೀಯ ಸಂಸ್ಥೆ ಚುನಾವಣೆ: ಗುಂಪುಗಾರಿಕೆ
ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಯ ಸಿದ್ಧತೆಯಲ್ಲಿದ್ದ ರಾಜಕೀಯ ಪಕ್ಷಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಯಾವುದೇ ರೀತಿಯಲ್ಲೂ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಇದೀಗ ಇದನ್ನು ಎದುರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಈ ಪರಿಸ್ಥಿತಿ ರಾಜ್ಯದಲ್ಲಿ ಇತ್ತೀಚೆಗೆ ಜನ್ಮ ತಾಳಿರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಹಾಗೂ ಕರ್ನಾಟಕ ಜನತಾಪಕ್ಷ (ಕೆಜೆಪಿ)ಕ್ಕೆ ಉಸಿರುಕಟ್ಟಿದ ವಾತಾವರಣವನ್ನು ಸೃಷ್ಟಿ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವೆರಡು ಪಕ್ಷಗಳು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಬರುವಷ್ಟು ಗಟ್ಟಿಯಾಗಿ ನಿಂತುಕೊಂಡಿಲ್ಲ. ಈ ಪಕ್ಷಗಳಲ್ಲಿ ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ನೇಮಕ ನಡೆಯುತ್ತಿದೆ. ಇಲ್ಲಿಗೆ ಬರುವವರಿಗೆ ಪಕ್ಷ ಸೇರಲು ಮುಕ್ತವಾದ ಅವಕಾಶ ಇದೆ. ಕೆಲವೇ ದಿನಗಳಲ್ಲಿ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನವೂ ಸಿಗಲಿದೆ. ಈ ಪರಿಸ್ಥಿತಿ ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶ ನೀಡಿದೆ.
ರಾಜಕೀಯ ಪಕ್ಷದಲ್ಲಿ ಗುಂಪುಗಾರಿಕೆ ಸಹಜ, ನಿಜ. ಆದರೆ, ಒಂದು ರಾಜಕೀಯ ಪಕ್ಷ ಹುಟ್ಟಿ ಒಂದೇ ವರ್ಷದೊಳಗೆ ಜಾತಿಯ ಆಧಾರದಲ್ಲಿ ಒಡೆಯುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ. ಈ ಪರಿಸ್ಥಿತಿ ಕೆಜೆಪಿಯಲ್ಲಿದೆ.
ಗುಂಪುಗಾರಿಕೆ: ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಕೆಜೆಪಿ ಪಕ್ಷದೊಳಗೆ ಗುಂಪುಗಾರಿಕೆ ಇದೆ. ಪಕ್ಷದ ಮುಖಂಡರು ತಮ್ಮೊಳಗೆ ಇರುವ ಯಾರನ್ನೂ ಕೂಡ ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಅನುಮಾನದ ಭೂತ ಕೆಲವರ ಬೆನ್ನು ಹತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಬೇರೆ ಪಕ್ಷದವರ ತಂತ್ರ, ಅದಕ್ಕೆ ಪ್ರತಿತಂತ್ರವನ್ನು ರೂಪಿಸಿ ಈ ಯುದ್ಧದಲ್ಲಿ ಗೆಲವು ಸಾಧಿಸಲು ಸದಾ ಕಣ್ಣಿಟ್ಟಿರುತ್ತಾರೆ. ಆದರೆ, ಕೆಜೆಪಿಯಲ್ಲಿ ಮಾತ್ರ ಬೇರೆ ಪಕ್ಷದವರ ಬಗ್ಗೆ ಯೋಚನೆ ಮಾಡಲು ಸಮಯ ಇಲ್ಲ. ತಮ್ಮೊಳಗಿರುವವರನ್ನೇ ಕಾಯಬೇಕಾದ ಸ್ಥಿತಿ ಬಂದಿದೆ.
ಇನ್ನು ಬಿಎಸ್ಆರ್ ಕಾಂಗ್ರೆಸ್ ಪಕ್ಷ ಒಂದೇಯಾದರೂ ಇಲ್ಲಿರುವುದು ಎರಡು ಗುಂಪುಗಳು. ಒಬ್ಬರಿಗೆ, ಇನ್ನೊಬ್ಬರನ್ನು ಕಂಡರೆ ಆಗುತ್ತಿಲ್ಲ. ಪರೋಕ್ಷವಾಗಿ ಪರಸ್ಪರ ಬೈದಾಡುವುದರಲ್ಲಿ ನಿರತರಾಗಿದ್ದಾರೆ. ಜಿದ್ದಿಗೆ ಬಿದ್ದು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಎಸ್ಆರ್ ಗೊಂದಲ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷದಿಂದ ಸ್ಪರ್ಧೆ ಮಾಡಲು ಅವಕಾಶ ಇದೆ. ಪಕ್ಷದಿಂದ ಸ್ಪರ್ಧೆ ಮಾಡಬೇಕಾದರೆ, ಆಯಾ ಪಕ್ಷದ ಬಿ ಫಾರಂ ಲಗತ್ತಿಸಬೇಕು. ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುವ ಅಧಿಕಾರ ಯಾರಿಗಿದೆ ಎಂದು ಆ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ತಿಳಿದಿಲ್ಲ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಪಕ್ಷದಿಂದ ಸ್ಪರ್ಧೆ ಮಾಡುವ ಅಪೇಕ್ಷೆಯನ್ನು ಹೊಂದಿರುವವರು ಗೊಂದಲದಲ್ಲಿದ್ದಾರೆ.
ಬಿಜೆಪಿ ಸಿದ್ಧತೆ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿವೆ. ಕಾಂಗ್ರೆಸ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಟಿಕೆಟ್ ಅಪೇಕ್ಷಿತರಿಂದ ವಾರ್ಡ್ವಾರು ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಫೆ. 19ರವರೆಗೆ ಕಾಲಾವಕಾಶ ನೀಡಲಾಗಿದೆ.
ಇನ್ನು ಬಿಜೆಪಿ ಕೂಡ ಚುನಾವಣೆಯ ಸಿದ್ಧತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದೆ. ಭಾನುವಾರ ಜಿಲ್ಲಾ ಬಿಜೆಪಿ ಮುಖಂಡರ ಸಭೆ ನಡೆಯಿತು. ಜೆಡಿಎಸ್ ಪಕ್ಷದ ಮುಖಂಡರು ವಾರ್ಡ್ವಾರು ಕಾರ್ಯಕರ್ತರ ಸಭೆಯನ್ನು ನಡೆಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.