ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಾನವ ಸಂಪನ್ಮೂಲ ಸಂಪತ್ತಾಗಲಿ

Lingaraj Badiger
Updated On : 19 Feb 2013, 10:53 am

ಚಿಕ್ಕಮಗಳೂರು: ಭಾರತದಲ್ಲಿರುವ ದೊಡ್ಡಪ್ರಮಾಣದ ಮಾನವ ಸಂಪನ್ಮೂಲ ದೇಶಕ್ಕೆ ಸಂಪತ್ತಾಗಿಸಲು ಜ್ಞಾನ ಮತ್ತು ವೃತ್ತಿ ಕೌಶಲ್ಯ ಪ್ರಮುಖ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಯುರೇಕಾ ಅಕಾಡೆಮಿ ಮತ್ತು ಯರೋಪರ್ಲ್ಸ್ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತರನ್ನು ಸನ್ಮಾನಿಸಿ ಮಾತನಾಡಿ, ವಿಶ್ವದಲ್ಲಿ ಯುವಕರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚಿದೆ. ಯುವಕರಿಗೆ ವೃತ್ತಿಪರ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿದ್ದೇಯಾದರೆ ವಿಶ್ವದ ಉಳಿದೆಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗುತ್ತದೆ ಎಂದರು.
ಆಧ್ಯಾತ್ಮವೇ ಭಾರತದ ಸಾಮರ್ಥ್ಯ: ಜ್ಞಾನ ಜಾಗತೀಕ ಶಕ್ತಿಯಾಗಿ ರೂಪುಗೊಳ್ಳುವ ದಿನ ಭಾರತ ವಿಶ್ವವನ್ನು ಮುನ್ನಡೆಸುತ್ತದೆ. ಜ್ಞಾನ ಮತ್ತು ಆಧ್ಯಾತ್ಮವೇ ಭಾರತದ ಸಾಮರ್ಥ್ಯ. ಈಗ ಇವೆರಡಕ್ಕೂ ಬೆಲೆ ಬರುತ್ತಿರುವುದರಿಂದ ವಿಶ್ವದಲ್ಲಿ ಭಾರತವೂ ಮುಂಚೂಣಿ ರಾಷ್ಟ್ರವಾಗಿ ಮೂಡಿಬರುವ ಆಶಯವಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಯುವಕರನ್ನು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಸಿದ್ಧಪಡಿಸುವ ಮಾರ್ಗದರ್ಶನ ಕೊರತೆ ಕಾಣುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆತ್ಮಾಭಿಮಾನ ಅಗತ್ಯ: ಪ್ರತಿ ಮಗುವಿಗೆ ವಿದ್ಯೆ ನೀಡಿದರಷ್ಟೇ ಸಾಲದು, ಸ್ವಾಭಿಮಾನ, ಆತ್ಮಾಭಿಮಾನ, ಸಮಾಜಪ್ರೀತಿ, ರಾಷ್ಟ್ರಪ್ರೇಮ, ಸಂಸ್ಕೃತಿ, ಸಂಸ್ಕಾರ ಜೊತೆಗೆ ಸ್ವಂತಕಾಲ ಮೇಲೆನಿಲ್ಲುವ ಸ್ವಾವಲಂಬನೆಯ ಶಿಕ್ಷಣ ಇಂದಿನ ಅಗತ್ಯ ಎಂದು ಹೇಳಿದರು.
ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಶಿಕ್ಷಣ ಮಕ್ಕಳ ಸರ್ವಾಗೀಣ ವಿಕಾಸ. ಆತ್ಮವಿಶ್ವಾಸ ಮತ್ತು ಶ್ರದ್ಧೆ ಇರುವ ವ್ಯಕ್ತಿಯ ಸಾಧನೆಗೆ ಮಿತಿ ಇಲ್ಲ ಎಂದು  ಹೇಳಿದರು.
ಅಕ್ಕ ಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಮಾನವೀಯ ಮೌಲ್ಯ, ಶಿಸ್ತು, ವಿನಯವಂತಿಕೆ, ಸ್ವಚ್ಛತೆಯನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕೆಂದರು.
ಮೂಡಿಗೆರೆ ಮೂಲದ ಕರ್ನಲ್ ಪಿ.ವಿ. ಹರಿ ಇತ್ತೀಚೆಗೆ ಸೇನೆಯಿಂದ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಸಚಿವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶಭಕ್ತಿ, ಸಮಾಜಪ್ರೀತಿ ಎಲ್ಲರ ಮೊದಲ ಆದ್ಯತೆ ಆಗಬೇಕು. ಪಾರದರ್ಶಕವಾದ ವರ್ತನೆಯಿಂದ ಸಮಾಜಕ್ಕೆ ಒಳಿತಿದೆ ಎಂದರು.
ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಮತ್ತು ಮಾರ್ಗದರ್ಶನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆಂತರಿಕವಾಗಿ ಅಡಗಿರುವ ಶಕ್ತಿ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಡುವುದೇ ಶಿಕ್ಷಣ ಸಂಸ್ಥೆಗಳ ಕಾರ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement