ರಕ್ತದಾನ ಕುರಿತು ತಪ್ಪು ಕಲ್ಪನೆ
ಚಿಕ್ಕಮಗಳೂರು: ತಪ್ಪು ಕಲ್ಪನೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ರಕ್ತದಾನಕ್ಕೆ ಮುಂದಾಗುತ್ತಿಲ್ಲ ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್ ಮತ್ತು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಗರದ ಎಐಟಿ ಕಾಲೇಜಿನಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಅನೇಕ ಜನರ ಪ್ರಾಣ ಉಳಿಸಬಹುದು ಎಂದರು.
ಅಪಘಾತದ ವೇಳೆ ಸಾವಪ್ಪಲು ಮೂಲ ಕಾರಣ ಸಕಾಲಕ್ಕೆ ರಕ್ತ ದೊರೆಯದಿರುವುದು ಎಂದ ಅವರು, ಯುವ ಜನತೆ ಮನಸ್ಸು ಮಾಡಿ ಸ್ವಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾದಲ್ಲಿ ಜನರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ಜನರಿಗೆ ರಕ್ತದಾನದ ಮಹತ್ವವನ್ನು ತಿಳಿಸುವ ಮೂಲಕ ರಕ್ತದಾನ ಮತ್ತು ಅಂಗಾಂಗ ದಾನ ಮಾಡುವಂತೆ ಮನವೊಲಿಸಬೇಕು ಎಂದು ಸಲಹೆ ಮಾಡಿದರು.
ಸಮಾಜಸೇವೆಗೆ ಮುಂದಾಗಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಸುಂದರೇಗೌಡ ಮಾತನಾಡಿ, ತಮ್ಮ ಸಂಸ್ಥೆ ದಾನಿಗಳಿಂದ ರಕ್ತವನ್ನು ಶೇಖರಿಸುವುದರ ಜೊತೆಗೆ ಸಮಾಜಸೇವೆ ಕೆಲಸದಲ್ಲೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಪ್ರೊ. ಹೇಮಂತ್ ಪ್ರಭು, ತಮ್ಮ ಸಂಸ್ಥೆಯ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಲಯನ್ಸ್ ವಲಯಾಧ್ಯಕ್ಷ ಶಶಿಪ್ರಸಾದ್, ಲಯನೆಸ್‌ನ ಅಧ್ಯಕ್ಷೆ ನಾಗಲಾ ಮಂಜುನಾಥ್, ಕಾರ್ಯದರ್ಶಿ ಗೋವಿಂದೇಗೌಡ, ರೆಡ್‌ಕ್ರಾಸ್‌ನ ಕಾರ್ಯದರ್ಶಿ ಬಾಬುಶಂಕರ್ ಇದ್ದರು.