ಸಹಕಾರ ಸಾರಿಗೆಗೆ ರಿಯಾಯಿತಿ ಡೀಸೆಲ್
ಕೊಪ್ಪ: ಕೇಂದ್ರ ಸರ್ಕಾರ ಮೀನುಗಾರಿಕೆ ಬೋಟ್‌ಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ನೀಡಿದ್ದು, ಅದರಂತೆ ಸಹಕಾರ ಸಾರಿಗೆ ಸಂಸ್ಥೆಗೂ ರಿಯಾಯಿತಿ ದರದಲ್ಲಿ ಡೀಸೆಲ್ ಕಲ್ಪಿಸಲು ಪ್ರಯತ್ನಿಸುವುದಾಗಿ ಸಂಸದ ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾರ್ಮಿಕರೇ ಮಾಲೀಕರಾಗಿ ನಡೆಸುತ್ತಿರುವ ಸಹಕಾರ ಸಾರಿಗೆ ಬೆಳವಣಿಗೆ ಸಂತಸ ತಂದಿದೆ. ಈ ಸಂಸ್ಥೆ ಪ್ರಗತಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿರುವುದಾಗಿ ಹೇಳಿದರು.
ಸಂಘಟಿತರಾಗಿ: ಕೃಷಿ ರಂಗದಲ್ಲೂ ಇಂತಹ ಸಹಕಾರ ತತ್ವದ ಅನಿವಾರ್ಯತೆ ಇದ್ದು, ರೈತರು ಸಹಕಾರ ತತ್ವದಡಿ ಸಂಘಟಿತರಾಗಬೇಕು. ಇದರಿಂದ ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ರೈತರು ಸಹಕಾರ ಸಾರಿಗೆ ಮಾದರಿಯಲ್ಲಿ ಸಹಕಾರ ತತ್ವದಡಿ ಸಂಘಟಿತರಾಗಿ ಕೃಷಿ ಕಾರ್ಯಗಳನ್ನು ಸಾಮೂಹಿಕವಾಗಿ ನಿರ್ವಹಿಸಿದಲ್ಲಿ ಯಶಸ್ಸು ಸಾಧ್ಯ ಎಂದರು.
ರಿಯಾಯಿತಿಗೆ ಮನವಿ: ಸಹಕಾರ ಸಾರಿಗೆ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ಮಾತನಾಡಿ, ಅತ್ಯಂತ ಕಷ್ಟದ ದಿನಗಳಲ್ಲೂ ದುಡಿಮೆಯ ಒಂದು ಭಾಗವನ್ನು ತೊಡಗಿಸುವ ಮೂಲಕ ಕಾರ್ಮಿಕರೆಲ್ಲ ಸೇರಿ ಆರಂಭಿಸಿದ ಸಹಕಾರ ಸಾರಿಗೆ ಇಂದು 400 ಕುಟುಂಬಗಳ ಅನ್ನದಾತ ಸಂಸ್ಥೆಯಾಗಿ ರೂಪುಗೊಂಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಡೀಸೆಲ್ ಬೆಲೆಯಿಂದ ಸಂಸ್ಥೆ ನಡೆಸುವುದು ಕಷ್ಟವಾಗುತ್ತಿದ್ದು, ಡೀಸೆಲ್ ಸಗಟು ಖರೀದಿದಾರರಾದ್ದರಿಂದ ಕೇಂದ್ರ ಸರ್ಕಾರಕ್ಕೆ ಸಂಸದರು ಒತ್ತಡ ತಂದು ರಿಯಾಯಿತಿ ಒದಗಿಸಿ ಕೊಡುವಂತೆ ಮನವಿ ಮಾಡಿದರು.
ಸಂಸ್ಥೆಯ ನೌಕರರು ಅಲ್ಪವೇತನ ಪಡೆಯುತ್ತಿದ್ದರೂ ಸರ್ಕಾರಿ ನೌಕರರೆಂಬಂತೆ ಪರಿಗಣಿಸಿ. ಬಿಪಿಎಲ್ ಕಾರ್ಡ್, ವಿಧವಾ ವೇತನ, ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಾನೂನು ಅಡ್ಡಿಯಾಗುತ್ತಿರುವುದನ್ನು ನಿವಾರಿಸಿ, ಅನುಕೂಲ ಒದಗಿಸುವಂತೆ ಕೋರಿದರು.
ಮುಖಂಡರಾದ ವೆಂಕಟೇಶ್, ಶೋಭಿಂತ್, ನಾರ್ವೆ ಅಶೋಕ್, ಸಹಕಾರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಧರ್ಮಪ್ಪ, ವ್ಯವಸ್ಥಾಪಕ ನಿರ್ದೇಶಕ ಗಾಡ್ವಿನ್ ಜಯಪ್ರಕಾಶ್, ನಿರ್ದೇಶಕರಾದ ಮಹೇಶ್, ತಮ್ಮಣ್ಣಗೌಡ, ರಮೇಶ್, ಹಾಲಪ್ಪಗೌಡ, ಕೃಷ್ಣಮೂರ್ತಿ, ವೆಂಕಟರಾಮ್ ಇದ್ದರು.