22,575 ನಿವೇಶನರಹಿತರು
ಚಿಕ್ಕಮಗಳೂರು: ನಗರ ಪ್ರದೇಶದಲ್ಲಿ ವಾಸವಾಗಿರುವ ಬಹಳಷ್ಟು ಮಂದಿ ಬಡವರಿಗೆ ಸ್ವಂತ ಸೂರಿಲ್ಲ. ನಿವೇಶನ ಖರೀದಿಸಲು ಹಣ ಇಲ್ಲ. ಇದೇ ಪರಿಸ್ಥಿತಿ ಗ್ರಾಮಾಂತರ ಪ್ರದೇಶದಲ್ಲೂ ಇದೆ ಎಂಬುದು ಜಿಲ್ಲಾಡಳಿತದ ಬಳಿ ಇರುವ ಅಂಕಿ ಅಂಶಗಳು ಹೇಳುತ್ತಿವೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಸರ್ವೆ ನಡೆಸಿರುವ ಪ್ರಕಾರ 27,852 ಕುಟುಂಬಗಳಿಗೆ ಸ್ವಂತ ನಿವೇಶನಗಳಿಲ್ಲ. ಈವರೆಗೆ ಮಂಜೂರು ಮಾಡಿರುವ ನಿವೇಶನಗಳ ಸಂಖ್ಯೆ ಬರೀ 5277 ಮಾತ್ರ. ಅಂದರೆ, ಇಂದಿಗೂ ಕೂಡ 22,575 ಕುಟುಂಬಗಳು ನಿವೇಶನ ರಹಿತರ ಪಟ್ಟಿಯಲ್ಲಿವೆ.
ತರೀಕೆರೆ ತಾಲೂಕಲ್ಲಿ ಹೆಚ್ಚು: ನಿವೇಶನ ರಹಿತರಲ್ಲಿ ಅತಿ ಹೆಚ್ಚು ಕುಟುಂಬಗಳು ತರೀಕೆರೆ ತಾಲೂಕಿನಲ್ಲಿವೆ. ಅಂದರೆ, ಇಲ್ಲಿನ 10,355 ಕುಟುಂಬಗಳಿಗೆ ಸ್ವಂತ ನಿವೇಶನ ಇಲ್ಲ. ಇನ್ನುಳಿದಂತೆ ಚಿಕ್ಕಮಗಳೂರು ತಾಲೂಕಿನಲ್ಲಿ 260, ಕಡೂರಿನಲ್ಲಿ 8669, ಎನ್.ಆರ್.ಪುರ ತಾಲೂಕಲ್ಲಿ 1,025, ಕೊಪ್ಪ ತಾಲೂಕಿನಲ್ಲಿ 2,371, ಶೃಂಗೇರಿಯಲ್ಲಿ 1,146 ಹಾಗೂ ಮೂಡಿಗೆರೆ ತಾಲೂಕಿನಲ್ಲಿ 4,026 ಕುಟುಂಬಗಳಿಗೆ ನಿವೇಶನಗಳಿಲ್ಲ.
ನಿವೇಶನ ರಹಿತರ ಪಟ್ಟಿಯನ್ನು ವರ್ಗವಾರು ವಿಂಗಡಣೆ ಮಾಡಿದರೆ, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳ ಸಂಖ್ಯೆ ಅಧಿಕವಾಗಿದೆ.
522 ಕುಟುಂಬಕ್ಕೆ: ನಿವೇಶನ ರಹಿತ ಪರಿಶಿಷ್ಟ ಜಾತಿಯ 10,480 ಕುಟುಂಬಗಳ ಪೈಕಿ 1,590 ಜನರಿಗೆ ಮಾತ್ರ ಈವರೆಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇನ್ನುಳಿದಂತೆ ಪರಿಶಿಷ್ಟ ಪಂಗಡದಲ್ಲಿ 5,277 ಕುಟುಂಬಗಳಿಗೆ ನಿವೇಶನದ ಅಗತ್ಯತೆ ಇದ್ದು, ಇದರಲ್ಲಿ 522 ಕುಟುಂಬಗಳಿಗೆ ಮಾತ್ರ ನಿವೇಶನ ಮಂಜೂರು ಮಾಡಲಾಗಿದೆ.
ಇತರೆ ವರ್ಗದ 5,594 ಕುಟುಂಬಗಳು ಗುರುತು ಮಾಡಲಾಗಿದ್ದು, ಈ ಪೈಕಿ 3327 ಕುಟುಂಬಗಳಿಗೆ ನಿವೇಶನ ಹಂಚಿಕೆಯಾಗಿದೆ. ಇತರೆ ವರ್ಗಗಳಿಗೆ ಹೋಲಿಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿತರಣೆ ಮಾಡಿರುವ ನಿವೇಶನಗಳ ಸಂಖ್ಯೆ ತೀರಾ ಕಡಿಮೆ.
ಭೂ ಸ್ವಾಧೀನ: ಆಶ್ರಯ ನಿವೇಶನ ಮಂಜೂರು ಮಾಡಲು ಜಿಲ್ಲೆಯಲ್ಲಿ ಈವರೆಗೆ 350.99 ಎಕರೆ ಭೂಮಿಯನ್ನು ಗುರುತು ಮಾಡಲಾಗಿದೆ. ಅವುಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 9.94 ಎಕರೆ, ಕಡೂರು ತಾಲೂಕಿನಲ್ಲಿ 12 ಎಕರೆ, ತರೀಕೆರೆಯಲ್ಲಿ 38.01 ಎಕರೆ, ಮೂಡಿಗೆರೆ ತಾಲೂಕಿನಲ್ಲಿ 291.04 ಎಕರೆ ಭೂಮಿಯನ್ನು ಸ್ವಾಧೀನಕ್ಕಾಗಿ ಗುರುತು ಮಾಡಲಾಗಿದೆ. ಇನ್ನುಳಿದಂತೆ ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ನಿವೇಶನಕ್ಕಾಗಿ ಈವರೆಗೆ ಭೂಮಿಯನ್ನು ಗುರುತುಪಡಿಸಿಲ್ಲ. ಆಶ್ರಯ ನಿವೇಶನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಜಿಲ್ಲಾಡಳಿತದಿಂದ ಪ್ರಗತಿಯಲ್ಲಿದೆ. ಆದರೆ, ಇದರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ.