ಚುನಾವಣೆ: ಜನರಲ್ಲಿ ನಿರಾಸಕ್ತಿ
ಶೃಂಗೇರಿ: ಮಾ.7 ರಂದು ಪಟ್ಟಣದ 11 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ 16 ರಿಂದ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದ್ದರೂ ಮಂಗಳವಾರದವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಮತದಾರರಲ್ಲಿ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ. ಯಾವುದೇ ರೀತಿಯಲ್ಲಿ ರಾಜಕೀಯ ಜಿದ್ದಾ ಜಿದ್ದಿ, ಸ್ಪರ್ಧೆಗಳು ಕಂಡುಬರುತ್ತಿಲ್ಲ. ಒಟ್ಟು ಎರಡು ಸಾವಿರದ ಏಳುನೂರು ಮತದಾರರಿದ್ದು ಮತದಾರರು ಯಾವುದೇ ರೀತಿಯಲ್ಲಿ ಚನಾವಣೆಯತ್ತ ಆಸಕ್ತಿ ವಹಿಸುತ್ತಿಲ್ಲ. ಉಮೇದುವಾರಿಕೆಗೂ ಆಸಕ್ತಿ ಕಂಡುಬರುತ್ತಿಲ್ಲ. 23 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 27 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ.
ಉಪನ್ಯಾಸ
ಕೊಪ್ಪ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕರಿಮನೆ-ಕಲ್ಕೆರೆಯ ಸ.ಹಿ.ಪ್ರಾ.ಶಾಲೆ ಆಶ್ರಯದಲ್ಲಿ 22 ರ ಮಧ್ಯಾಹ್ನ 2-30ಕ್ಕೆ ಕಲ್ಕೆರೆ ಶಾಲಾ ಆವರಣದಲ್ಲಿ ಕರ್ಣಾಟ ಭಾರತ ಕಥಾಮಂಜರಿ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಶಂಕರ ನಾರಾಯಣ್ ಉಪನ್ಯಾಸ ನೀಡಲಿದ್ದಾರೆ.