ಬಿಜೆಪಿ ಮುಗಿಸಲು ಅನಂತಕುಮಾರ್, ಸಂತೋಷ್ ಸಾಕು
ಚಿಕ್ಕಮಗಳೂರು: ಬಿಜೆಪಿ ಮುಗಿಸಲು ಅನಂತಕುಮಾರ್ ಮತ್ತು ಸಂತೋಷ್ ಇವರಿಬ್ಬರೇ ಸಾಕು. ಇವರಿದ್ದರೆ ಆ ಪಕ್ಷಕ್ಕೆ ಬೇರ್ಯಾರೂ ಮಿತ್ರರೂ ಬೇಡ, ಶತ್ರುಗಳೂ ಬೇಡ ಎಂದು ಕೆಜೆಪಿ ಮುಖಂಡ, ಮಾಜಿ ಸಚಿವ ಧನಂಜಯಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೆಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ಸಿಂಗ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಧನಂಜಯಕುಮಾರ್, ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಹಾಗೇನಾದರೂ ಅಂತಹ ಸಂದರ್ಭ ಬಂದಲ್ಲಿ ಬಿಜೆಪಿಯಿಂದ ಅನಂತಕುಮಾರ್, ಈಶ್ವರಪ್ಪ, ಸಂತೋಷ್ ಅವರನ್ನು ಹೊರಹಾಕಬೇಕು. ಇದು ಅಸಾಧ್ಯವಾದ ಮಾತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಸಂಘಟನೆಯ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ, ಕೆಲವು ವ್ಯಕ್ತಿಗಳ ಷಡ್ಯಂತ್ರ ಆ ಪಕ್ಷದಲ್ಲಿದೆ. ಅಲ್ಲಿ ಇದೀಗ ನಾಯಕತ್ವದ ಕೊರತೆ ಇದೆ. ಮುಂದಿನ ಚುನಾವಣೆಯಲ್ಲಿ ಯಾರ ಜತೆಗೂ ಹೊಂದಾಣಿಕೆ ಇಲ್ಲ. ನಗರ ಸ್ಥಳೀಯ ಸಂಸ್ಥೆಗಳ 208 ವಾರ್ಡ್ಗಳಲ್ಲಿ ಕೆಜೆಪಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.
ಸದಾನಂದಗೌಡರು ಜೆಡಿಎಸ್ಗೆ!: ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮುನಿಸಿಕೊಂಡು ಹೊರಗೆ ಹೋಗಿದ್ದಾರೆ. ಸುಳ್ಯದಲ್ಲಿ ಬಿಜೆಪಿಯಲ್ಲಿದ್ದವರನ್ನು ಜೆಡಿಎಸ್ಗೆ ಕಳುಹಿಸುವ ಕೆಲಸ ಸದಾನಂದಗೌಡರು ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಬಿಜೆಪಿ ತೊರೆಯುವುದು ಖಚಿತ. ಜೆಡಿಎಸ್ನಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಸಿಗದೆ ಹೋದರೆ, ಬಿಜೆಪಿಯಿಂದಲೇ ಒಂದು ಕುರ್ಚಿ ತೆಗೆದುಕೊಂಡು ಹೋಗಿ ಕುಳಿತುಕೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡಿದರು.