ಶಿಕ್ಷಣ ವ್ಯಕ್ತಿತ್ವ ರೂಪಿಸುವಂತಿರಲಿ
ಚಿಕ್ಕಮಗಳೂರು: ಶಿಕ್ಷಣ ಕೇವಲ ಅಂಕ ಪಡೆಯುವ ಮಾನದಂಡವಾಗದೆ, ವಿದ್ಯಾರ್ಥಿಗಳಿಗೆ ಪರಿಪೂಣ ವ್ಯಕ್ತಿತ್ವ ರೂಪಿಸಿಕೊಡುವಂತಿರಬೇಕು ಎಂದು ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್. ಮಹೇಶ್ ಹೇಳಿದರು.
ನಗರದ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರೇಂಜರ್ಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳಿಸುವಲ್ಲಿ ಸ್ಕೌಟ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಕೋಟ್ಯಂತರ ಜನರು ಈ ಚಳವಳಿಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸಮಾಜ ಸೇವೆ, ಪರಿಸರ, ಸಾಹಸ ಚಟುವಟಿಕೆ ಸೇರಿದಂತೆ ಮಾನವೀಯ ಮೌಲ್ಯ ಬೆಳೆಸುವಂತಹ ಚಟುವಟಿಕೆಯನ್ನು ಸಂಸ್ಥೆ ಮಾಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜಿನಲ್ಲಿ ಇಂತಹ ಘಟಕ ಪ್ರಾರಂಭವಾದರೆ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಂತಾಗುತ್ತದೆ ಎಂದು ಹೇಳಿದರು.
ಹೋರಾಟದ ಹೆಜ್ಜೆ: ಹಿರಿಯ ಸ್ಕೌಟರ್ ನೀಲಕಂಠಾಚಾರ್ ಮಾತನಾಡಿ, 17 ರಿಂದ 35 ವರ್ಷದೊಳಗಿನ ವಯೋವಾನವನ್ನು ನಾವು ಉತ್ಪಾದನಾ ವಯಸ್ಸೆಂದು ಪರಿಗಣಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ಪಡೆಯಬೇಕಾದರೆ ಕಾಲೇಜು ತೊರೆದು ಗಾಂಧೀಜಿಯವರ ಜೊತೆಯಲ್ಲಿ ಹೋರಾಟದಲ್ಲಿ ಹೆಜ್ಜೆ ಹಾಕಿದವರಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳೇ ಆಗಿದ್ದರು ಎಂದರು.
ಜಿಲ್ಲಾ ಕಾರ್ಯದರ್ಶಿ ಶಶಿಧರ್‌ರಾವ್ ಮಾತನಾಡಿ, ನಾವು ಬದುಕಿರುವಷ್ಟು ಕಾಲ ನಾಲ್ಕಾರು ಜನರಿಗೆ ಉಪಯೋಗವಾಗುವಂತೆ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಅದಕ್ಕಾಗಿ ಈ ಸಂಸ್ಥೆ ದಾರಿ ಮಾಡಿಕೊಡಲಿದ್ದು, ನಂತರ ನಡೆಯುವವರು ನೀವಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಶಿವಣ್ಣ ಮಾತನಾಡಿ, ನಾವೆಲ್ಲಾ ಒಂದೇ ಕುಟುಂಬವೆಂಬ ಭಾವನೆ ಎಲ್ಲರಲ್ಲೂ ಬಂದಾಗ ಒಂದು ದೇಶ ಸದೃಢವಾಗಲಿದೆ. ಮಾನವೀಯ ಮೌಲ್ಯ, ಶಿಸ್ತುಪಾಲನೆಯಲ್ಲಿ ಯುವ ಜನರನ್ನು ಕೊಂಡೊಯ್ಯಲು ಸ್ಕೌಟ್ ಸಂಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರೇಂಜರ್ಸ್ ಲೀಡರ್ ಪ್ರೊ. ಜಿ.ಕೆ. ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ ಪ್ರಮಾಣ ವಚನ ಬೋಧಿಸಿದರು. ಎಟಾ ಪೆರಿರಾ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರ ಸ್ವಾಗತಿಸಿದರು. ಪ್ರೊ. ಹನುಮಂತಪ್ಪ ವಂದಿಸಿದರು.