ಹೆದ್ದಾರಿಯಲ್ಲಿದ್ದ ಹೆಬ್ಬಂಡೆ ಎತ್ತಂಗಡಿ
ತರೀಕರೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಆರು ತಿಂಗಳಿನಿಂದ ಬಿದ್ದಿದ್ದ ಬೃಹತ್ ಗಾತ್ರದ ಹೆಬ್ಬಂಡೆಗಳಿಗೆ ನಗರ ನೀರು ಸರಬರಾಜು ಇಲಾಖೆ ಕೊನೆಗೂ ಸ್ಥಳಾಂತರಗೊಳಿಸಿ ರಸ್ತೆಯನ್ನು ಖುಲ್ಲಾ ಮಾಡಿದೆ.
ಭದ್ರಾ ನದಿಯಿಂದ ಪಕ್ಕದ ಊರಿಗೆ ನೀರು ತೆಗೆದುಕೊಂಡು ಹೋಗಲು ನಗರ ನೀರು ಸರಬರಾಜು ಇಲಾಖೆ, ದೊಡ್ಡ ಕಾಲುವೆ ತೋಡಿದ ಸಂದರ್ಭದಲ್ಲಿ ಹೊರಹಾಕಿದ್ದ ಈ ಬೃಹತ್ ಕಲ್ಲು ಬಂಡೆಗಳು ಆರು ತಿಂಗಳಿನಿಂದ ರಸ್ತೆಯ ನಡುವೆಯೇ ಇದ್ದಲ್ಲಿಯೇ ಇದ್ದು ವಾಹನ ಮತ್ತು ಜನ ಸಂಚಾರಕ್ಕೆ ಭಾರಿ ಅಡ್ಡಿಯುಂಟಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಾದುದರಿಂದ ದಿನದ ಇಪ್ಪತ್ನಾಲ್ಕು ಗಂಟೆಗಳೂ ಹಗಲು ರಾತ್ರಿಯನ್ನದೆ ಧಟ್ಟವಾದ ವಾಹನ ಸಂಚಾರದಿಂದ ಕೂಡಿದ ರಸ್ತೆಯ ನಡುವೆಯೇ ಕಲ್ಲು ಬಂಡೆಗಳು ಬಿದ್ದಿದ್ದರಿಂದ ಸುರಕ್ಷಿತ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.
ಈ ಬಗ್ಗೆ 'ಕನ್ನಡಪ್ರಭ' ಜನ ಮತ್ತು ವಾಹನ ಸಂಚಾರಕ್ಕೆ ಅಗುತ್ತಿರುವ ತೊಂದರೆ ಬಗ್ಗೆ ಸಚಿತ್ರ ವರದಿ ಮಾಡಿ ಬೆಳಕು ಚೆಲ್ಲಿತ್ತು.
ಕೂಡಲೇ ಸ್ಪಂದಿಸಿದ ನೀರು ಸರಬರಾಜು ಇಲಾಖೆ ಸೋಮವಾರ ಅದಿಕಾರಿಗಳು ಸ್ಥಳಕ್ಕಾಗಮಿಸಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ನಡುವೆ ಬಿದ್ದಿದ್ದ ಬೃಹತ್ ಗಾತ್ರದ ಕಲ್ಲು ಬಂಡೆಗಳನ್ನು ಸ್ಥಳಾಂತರಗೊಳಿಸಿತು.