17 ನಾಮಪತ್ರ ಸಲ್ಲಿಕೆ
ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡು 5 ದಿನಗಳು ಕಳೆದಿದ್ದು, ಬುಧವಾರದವರೆಗೆ ಒಟ್ಟು 17 ನಾಮಪತ್ರಗಳು ಬಂದಿವೆ.
ಇವುಗಳಲ್ಲಿ ಚಿಕ್ಕಮಗಳೂರು ನಗರಸಭೆಗೆ 11, ಕಡೂರು- 1, ತರೀಕೆರೆ- 3, ಶೃಂಗೇರಿ- 1, ಎನ್.ಆರ್.ಪುರ- 1 ನಾಮಪತ್ರ ಬಂದಿದೆ. ಇನ್ನುಳಿದಂತೆ ಬೀರೂರು ಪುರಸಭೆ ಹಾಗೂ ಮೂಡಿಗೆರೆ ಮತ್ತು ಕೊಪ್ಪ ಪಪಂಗಳಿಗೆ ಈವರೆಗೆ ಒಂದೂ ನಾಮಪತ್ರ ಬಂದಿರುವುದಿಲ್ಲ.
ಚಿಕ್ಕಮಗಳೂರು ನಗರಸಭೆಗೆ ಬಂದಿರುವ 11 ನಾಮಪತ್ರಗಳ ಪೈಕಿ ಬಿಜೆಪಿ- 4, ಜೆಡಿಎಸ್- 3, ಸ್ವತಂತ್ರರು- 4, ತರೀಕೆರೆ ಪುರಸಭೆಗೆ ಬಂದಿರುವ 3 ನಾಮಪತ್ರಗಳಲ್ಲಿ ಕಾಂಗ್ರೆಸ್-1, ಸ್ವತಂತ್ರರು- 2. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕಾರ ಮಾಡಿವೆ. 2007ರ ಮೀಸಲಾತಿ ಪ್ರಕಾರ ಈ ಚುನಾವಣೆ ನಡೆಯುತ್ತಿರುವುದರಿಂದ ಈ ಹಿಂದೆ ಸ್ಪರ್ಧಿಸಿ ಜಯಗಳಿಸಿದ್ದವರಿಗೆ ಈ ಬಾರಿ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಭರದಿಂದ ಸಾಗಿದೆ.
--
ನೀರಿನ ಸಮಸ್ಯೆ ಪರಿಹರಿಸಿ
ತರೀಕೆರೆ: ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕೂಡಲೇ ಮಾಡಬೇಕೆಂದು ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಹಾಗೂ ರೈತರು ಆಗ್ರಹಿಸಿದ್ದಾರೆ. ಜಿಪಂ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದಾರೆ. ತರೀಕೆರೆ ತಾಲೂಕಿನಲ್ಲಿ ಬರಗಾಲದಿಂದಾಗಿ ಜನ ಮತ್ತು ಜಾನುವಾರುಗಳು ನೀರಿಗಾಗಿ ಪರದಾಡುತ್ತಿವೆ. ಹಿಂದೆ ಟ್ಯಾಂಕರ್ ಮೂಲಕ ಕುಡಿಯುವ ನೀರು, ಜಾನುವಾರುಗಳಿಗೆ, ಬಟ್ಟೆ ಒಗೆಯುವುದಕ್ಕೆ ನೀರಿನ ವ್ವವಸ್ಥೆ ಮಾಡಿದ್ದು, ಈಗಲೂ ಅದೇ ರೀತಿ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.