ನೂರಕ್ಕೆ ನೂರು ಫಲಿತಾಂಶದ ಗುರಿ: ಸಂವಾದ ಕಾರ್ಯಕ್ರಮ
ಚಿಕ್ಕಮಗಳೂರು: ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರತಿಶತ ನೂರಕ್ಕೆ ನೂರು ಫಲಿತಾಂಶದ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ನುರಿತ ಶಿಕ್ಷಣ ತಜ್ಞರಿಂದ ವಿಶೇಷ ಬೋಧನೆ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಹೇಳಿದ್ದಾರೆ.
ನಗರದ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಜಿಪಂ, ತಾಪಂ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಶಿಕ್ಷಣ ಇಲಾಖೆ, ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವಸಿದ್ಧತೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸುವ ಸಲುವಾಗಿ 150 ಶಾಲೆಗಳಿಗೆ ನುರಿತ ಶಿಕ್ಷಣ ತಜ್ಞರನ್ನು ಕರೆಸಿ ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಮಕ್ಕಳಿಗೆ ವಿಶೇಷ ಬೋಧನೆ ನೀಡಲಾಗುವುದು.
ಕಳೆದ ಬಾರಿ ಫಲಿತಾಂಶದಲ್ಲಿನ ಕ್ಷಿಣತೆಯನ್ನು ಈ ಬಾರಿ ಸಂಪಾದಿಸಿ ಶೇ.100 ಫಲಿತಾಂಶ ಪಡೆಯುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪೋಷಕರೂ ಕೂಡಾ ಹೆಚ್ಚಿನ ಗಮನಹರಿಸಬೇಕೆಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಚ್.ಡಿ. ಚಂದ್ರಶೇಖರ್ ಮಾತನಾಡಿ, ಎಸ್ಎಸ್ಎಲ್ಸಿ ಜೀವನದಲ್ಲಿ ಪ್ರಮುಖ ತಿರುವು, ಪರೀಕ್ಷೆಯನ್ನು ಸಹಜವಾಗಿ ಎದುರಿಸಬೇಕು. ಜ್ವರ, ಉದ್ವೇಗ, ಒತ್ತಡ ಇದೆಲ್ಲಾ ಸಹಜ. ಅದನ್ನು ಎದುರಿಸಲು ಇಂತಹ ಸಂವಾದ ಮತ್ತು ವಿಶೇಷ ಬೋಧನೆ ಸಹಕಾರಿಯಾಗಲಿದೆ. ಮಕ್ಕಳು ಗೈರು ಹಾಜರಾಗದೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದರು.
ಜ್ಯೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಪುಟ್ಟಸ್ವಾಮಿಗೌಡ, ಸಂಪನ್ಮೂಲ ವ್ಯಕ್ತಿ ಶಂಕರ್ ನಾರಾಯಣಭಟ್ ಮತ್ತಿತರರು ಉಪಸ್ಥಿತರಿದ್ದರು.