ಪಾರ್ವತಿ ದೇವಾಲಯ ಲೋಕಾರ್ಪಣೆ
ಕಡೂರು: ಎಂಟು ಶತಮಾನಗಳಷ್ಟು ಹಳೆಯದಾದ ಕಡೂರು ತಾಲೂಕು ಸಿಂಗಟಗೆರೆಯ ಇತಿಹಾಸ ಪ್ರಸಿದ್ಧ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯದ ಶ್ರೀಪಾರ್ವತಿ ದೇವಾಲಯವನ್ನು 1.50 ಕೋಟಿ ವೆಚ್ಚದಲ್ಲಿ ನೂತನ ದೇವಾಲಯವನ್ನು ಲೋಕಾರ್ಪಣೆ ಮಾಡಲಾಯಿತು.
ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಪ್ರತಿಷ್ಠಾನದಿಂದ ಎಂಟು ಶತಮಾನಗಳಷ್ಟು ಹಳೆಯದಾದ ಹಾಗೂ ಶಿಥಿಲಗೊಂಡಿದ್ದ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದ್ದು ಕೆ. ಬಿದರೆಯ ದೊಡ್ಡಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿಯವರು ಕಳಸಾರೋಹಣ ಮಾಡಿದರು.
ಕುಂಭಾಭಿಷೇಕ: ಬೆಲಗೂರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಅವಧೂತರಾದ ಶ್ರೀ ಬಿಂದು ಮಾಧವಶರ್ಮ ಸ್ವಾಮೀಜಿ ಪ್ರಥಮವಾಗಿ ಬ್ರಹ್ಮ ಕಳಸದಿಂದ ಕುಂಭಾಭಿಷೇಕ ನೆರವೇರಿಸಿ ಮಾತನಾಡಿದರು.
ದೇವಾಲಯದ ಟ್ರಸ್ಟಿನ ಅಧ್ಯಕ್ಷರಾದ ಬಿ.ಕೆ.ನಾಗರಾಜು ಮಾತನಾಡಿ, ಸುಮಾರು ಒಂದೂವರೆ ಕೋಟಿರೂ ವೆಚ್ಚದಲ್ಲಿ ಈ ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಮೂಲಕ ನೂತನ ದೇವಾಲಯ ನಿರ್ಮಿಸಲಾಗಿದೆ. ನಿತ್ಯ ದಾಸೋಹವನ್ನು ಆರಂಭಿಸಲು ಆಲೋಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯದ ಸಮಿತಿ ಉಪಾಧ್ಯಕ್ಷ ಎಸ್.ಕೆ. ರಮೇಶ್, ಸಮಿತಿ ಸದಸ್ಯರಾದ ಮೂರ್ತಿ, ಯಾರ್ಲಘಟ್ಟ ಕುಮಾರ್, ಸಿಂಗಟಗೆರೆ ಕಲ್ಲೇಶಪ್ಪ,ನಂಜುಂಡಪ್ಪ, ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಸಂಜೆ ಸ್ಥಳೀಯ ಕಲಾವಿದರಿಂದ ಲಂಕಾದಹನ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.