ಪೈಪ್ ಮೂಲಕ ನೀರು ಕೊಡಿ
ತರೀಕೆರೆ: ನೀರು ಲಭ್ಯವಿರುವ ಹತ್ತಿರದ ಹಳ್ಳಿಗಳಿಂದ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಪೈಪುಗಳ ಮೂಲಕ ಕೂಡಲೇ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಸೂಜಿಸಿದ್ದಾರೆ.
ಬುಧವಾರ ತಾಪಂ ಸಭಾಂಗಣದಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ ಕುರಿತು ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಥಳೀಯ ಜಲತಜ್ಞರ ಸಹಕಾರ ಪಡೆದು ನೀರಿನ ಸೆಲೆ ಸಿಗುವ ಕಡೆ ಹೊಸದಾಗಿ ಬೋರ್ವೆಲ್ಗಳನ್ನು ಕೊರೆಯಬೇಕು, ಮೊದಲು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಅವರು ತಿಳಿಸಿದರು.
ಬಿಲ್ ಪಾವತಿಸಿ: ಸರ್ಕಾರದ ಸುತ್ತೋಲೆಯ ಪ್ರಕಾರವೇ ವಸತಿ ನಿರ್ಮಾಣ ಕಾರ್ಯವಾಗಬೇಕು, ಈಗಾಗಲೇ ಸಂಪೂರ್ಣವಾಗಿ ಕಟ್ಟಿದ ಮನೆಗಳಿಗೆ ತಡಮಾಡದೇ ಬಿಲ್ ಪಾವತಿಸಬೇಕು, ಬಡವರು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಹೊಸದಾಗಿ ಬೋರ್ವೆಲ್: ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಬೋರ್ವೆಲ್ಗಳನ್ನು ತೆಗೆಸುವಾಗ ನೀರಿನ ಪಾಯಿಂಟ್ಗಳನ್ನು ಗುರುತಿಸುವಾಗ ಸ್ಥಳೀಯರ ಸಲಹೆ ಮತ್ತು ಸಹಕಾರಗಳನ್ನು ಪಡಯಬೇಕು ಎಂದು ಸೂಚಿಸಿದರು.
ಜಿಪಂ ಸದಸ್ಯ ಕೆ.ಪಿ. ಕುಮಾರ್ ಮಾತನಾಡಿ, ಹಿಂದಿನಿಂದಲೂ ಗೌಳಿಗರ ಕ್ಯಾಂಪು ಮತ್ತು ಬರಗೇನಹಳ್ಳಿಯಲ್ಲಿ ಕುಡಿಯುನ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದೆ. ಬರಗೇನಹಳ್ಳಿಯಿಂದ 6 ಕಿಮೀ ದೂರದಿಂದ ಗಾಡಿಕಟ್ಟಿಕೊಂಡು ಹೋಗಿ ಚಾನಲ್ನಿಂದ ನೀರು ತರುತ್ತಿದ್ದಾರೆ.
ಗೌಳಿಗರ ಕ್ಯಾಂಪ್ನಲ್ಲಿ ಬೋರ್ವೆಲ್ಗಳಲ್ಲಿ ನೀರೇ ಇಲದಂತಾಗಿ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ನೀರಿನ ಸಮಸ್ಯೆ ಪರಿಹರಿಸಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ತಿಳಿಸಿದ ಅವರು ಕೂಡಲೇ ನೀರನ ಸಮಸ್ಯೆಯನ್ನು ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಕೂಡಲೇ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ತಿಳಿಸಿದರು. ಜಿಪಂ ಸದಸ್ಯರಾದ ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ವಿಶಾಲ ತಿಪ್ಪೇಶಪ್ಪ, ಹೇಮಾವತಿ ಕೃಷ್ಣಪ್ಪ, ತಾಪಂ ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ಜಿಪಂ ಮುಖ್ಯ ಕಾರ್ಯದರ್ಶಿ ಶಿವಶಂಕರ್, ಇಒ ದೇವರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.