ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆ
ನರಸಿಂಹರಾಜಪುರ: ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಗಳ ಜನರನ್ನು ಸಂಘಟಿಸಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ ಎಂದು ತಾಲೂಕು ಬಿಲ್ಲವರ ಸೇವಾ ಸಮಾಜ ಸಂಘದ ಅಧ್ಯಕ್ಷ ಆರ್. ಸದಾಶಿವ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿ.ಎಚ್. ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಬ್ಬಿಗಾ ಕಾರ್ಯಕ್ಷೇತ್ರದ ಸುತ್ತಾ ಹಾಗೂ ಬಿ.ಎಚ್. ಕೈಮರದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
30 ಸಾವಿರ ಸದಸ್ಯರು: ಯೋಜನೆಯ ಕೊಪ್ಪ, ಶೃಂಗೇರಿ ಹಾಗೂ ನ.ರಾ.ಪುರ ತಾಲೂಕುಗಳ ಯೋಜನಾಧಿಕಾರಿ ಎ.ಎಸ್. ಸುಕೇಶ್ ಮಾತನಾಡಿ, 1982 ರಲ್ಲಿ ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆಯವರು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ ಯೋಜನೆಯು ಇಂದು ರಾಜ್ಯದ 12 ಜಿಲ್ಲೆಗಳಿಗೆ ವ್ಯಾಪಿಸಿದೆ.
ರೈತರ ಸಮುದಾಯ ಕಾರ್ಯಕ್ರಮಕ್ಕೆ 2 ಕೋಟಿ 20 ಲಕ್ಷ ರುಪಾಯಿ ನೀಡಿದ್ದೇವೆ. ಸಂಪೂರ್ಣ ಸುರುಕ್ಷಾ ಯೋಜನೆಯಡಿ 98 ಸದಸ್ಯರಿಗೆ ಪರಿಹಾರ ನೀಡಿದ್ದೇವೆ. ಕೇಂದ್ರ ಸರ್ಕಾರದ ರಾಷ್ಟೀಯ ಪಿಂಚಣಿ ಯೋಜನೆಯಡಿ 60 ವರ್ಷ ದಾಟಿದ ಯೋಜನೆಯ ಸದಸ್ಯರಿಗೆ ಪಿಂಚಣಿ ನೀಡುವ ಯೋಜನೆಯಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುತ್ತಾ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ. ಶಂಕರ್ ವಹಿಸಿದ್ದರು. ತಿಮ್ಮರಾಜು, ಯಶೋದ ಭಟ್, ಆದರ್ಶ, ಅಣ್ಣಪ್ಪ ಇದ್ದರು.