ಕಾರ್ಮಿಕ ಇಲಾಖೆ ವಿರುದ್ಧ ಪ್ರತಿಭಟನೆ, ಮುತ್ತಿಗೆ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಟಿಂಬರ್ ಲಾರಿಗಳಲ್ಲಿ ಕೆಲಸ ಮಾಡುವವರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಟಿಂಬರ್ ಲಾರಿ ಚಾಲಕರು ಮತ್ತು ನಿರ್ವಾಹಕರು ಎಐಟಿಯುಸಿ ನೇತೃತ್ವದಲ್ಲಿ ಗುರುವಾರ ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಟಿಂಬರ್ ಲಾರಿ ಚಾಲಕರ ಮತ್ತು ನಿರ್ವಾಹಕರ ಸಂಘದ ಅಧ್ಯಕ್ಷ ಎಸ್. ವಿಜಯ್ ಕುಮಾರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕಾರ್ಮಿಕ ಇಲಾಖೆಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ವಾಹನ ತಪಾಸಣೆ ಮಾಡುವಲ್ಲಿ ವಿಫಲವಾಗಿದೆ. ಕಾರ್ಮಿಕರು ಕಾನೂನು ಪ್ರಕಾರ ದಿನಕ್ಕೆ 8 ಗಂಟೆ ಕೆಲಸ ಮಾಡುವುದರ ಜೊತೆಗೆ ಮಾಲೀಕರ ಒತ್ತಡದಿಂದ ಹೆಚ್ಚಿನ ಸಮಯ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಕಾನೂನಿನ ಪ್ರಕಾರ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ನೀಡುವವರಿಗೆ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಭತ್ಯೆ ನೀಡಬೇಕು: ಜಿಲ್ಲೆಯಾದ್ಯಂತ ಟಿಂಬರ್ ಲಾರಿಗಳಲ್ಲಿ ಕೆಲಸ ಮಾಡುತ್ತಿರುವ ಚಾಲಕರು ಹಾಗೂ ನಿರ್ವಾಹಕರುಗಳಿಗೆ ಸರ್ಕಾರದ ಕಾನೂನಿನ ಪ್ರಕಾರ 4707 ರು. ವೇತನವನ್ನು ನೀಡಬೇಕೆಂಬ ಆದೇಶವಿದ್ದರೂ ಯಾವುದೇ ಮಾಲೀಕರು ಈ ವೇತನವನ್ನು ನೀಡುತ್ತಿಲ್ಲ. ಟಿಂಬರ್ ಲಾರಿ ಚಾಲಕ ಮತ್ತು ನಿರ್ವಾಹಕರಿಗೆ 8 ಗಂಟೆ ಕೆಲಸವನ್ನು ನಿಗಧಿಗೊಳಿಸಿ ಹೆಚ್ಚುವರಿ ಕೆಲಸಕ್ಕೆ ಓವರ್ ಟೈಂ ನಂತಹ ಭತ್ಯೆ ನೀಡಬೇಕು. ಚಾಲಕರು ಹಾಗೂ ನಿರ್ವಾಹಕರು ಚಾಲನೆ ಮಾಡುವ ಲಾರಿಗಳು ಕಡಿದಾದ ರಸ್ತೆ ಮತ್ತು ತಿರುವುಗಳಲ್ಲಿ ಚಾಲನೆ ಮಾಡುತ್ತಿದ್ದು, ನಮಗೆ ಸುರಕ್ಷತೆ ಇಲ್ಲದಂತಾಗಿದ್ದು ನಮ್ಮ ಲಾರಿಗಳಿಗೆ ಕಡ್ಡಾಯವಾಗಿ ನಿರ್ವಾಹಕರನ್ನು ನೀಡದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದರು.
ರಜೆ ನೀಡಬೇಕು: ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಗುಣಶೇಖರ್ ಮಾತನಾಡಿ, ಟಿಂಬರ್ ಲಾರಿ ಚಾಲಕರು ಮತ್ತು ನಿರ್ವಾಹಕರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ಇಲ್ಲದೆ ಇರುವುದರಿಂದ ಸರ್ಕಾರದ ಕಾನೂನಿನಂತೆ ಎಲ್ಲಾ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಭವಿಷ್ಯನಿಧಿ, ಆರೋಗ್ಯ ನಿಧಿ, ಮತ್ತು ಸಂಬಳ ಸಹಿತ ರಜೆ ನೀಡಬೇಕೆಂಬ ಬೇಡಿಕೆಗಳನ್ನು ಇಟ್ಟು ಹಲವಾರು ಚಳುವಳಿಗಳನ್ನು ನಡೆಸಿದ್ದು, ಕಾರ್ಮಿಕ ಉಪ ಆಯುಕ್ತರ ಸಮ್ಮುಖದಲ್ಲಿ ದಾವಾ ಅರ್ಜಿ ಸಲ್ಲಿಸಲಾಗಿದ್ದು, ಸಹಾಯಕ ಕಾರ್ಮಿಕರ ಇಲಾಖೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಇಲಾಖೆಯ ನಿರ್ಲಕ್ಷತೆ ಮತ್ತು ಮಾಲೀಕರ ಅಸಡ್ಡೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿದ್ಧಿಖ್, ನಂದೀಶ್, ಪ್ರಧಾನ ಕಾರ್ಯದರ್ಶಿ ಯೋಗೀಶ್, ಸಹ ಕಾರ್ಯದರ್ಶಿ ರೇವಣ್ಣ, ಖಜಾಂಚಿ ಮಂಜುನಾಥ್, ಅಂಗನವಾಡಿ ಕಾರ್ಯಕರ್ತರ ಸಂಘದ ಇಂದುಮತಿ ಹಾಗೂ ಟಿಂಬರ್ ಲಾರಿ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.