ತಾಪಂ ಸದಸ್ಯರ ಸಾಮಾನ್ಯ ಸಭೆ
ತರೀಕೆರೆ: ತಾಪಂ ಅಧ್ಯಕ್ಷೆ ದೀಪಾ ಉಮೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಸಮೀಪದ ಬೇಲೇನಹಳ್ಳಿ ಸಮುದಾಯ ಭವನದಲ್ಲಿ ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆ ಏರ್ಪಡಿಸಲಾಗಿತ್ತು.
ಸದಸ್ಯ ಬಿ.ಆರ್. ರವಿ ಮಾತನಾಡಿ, ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಬೋರ್ವೆಲ್ಗಳನ್ನು ತೆಗೆಸುವ ಬದಲು ಮೊದಲು ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕವಾದರೂ ಕುಡಿಯುವ ನೀರು ಸರಬರಾಜು ಮಾಡಬೇಕು. ಒಂದು ನೂರು ಟ್ಯಾಂಕರ್ಗಳನ್ನು ತರಿಸಿ ಲಭ್ಯವಿರುವ ಕಡೆಯಿಂದ ನೀರನ್ನು ಸಂಗ್ರಹಿಸಿ, ಸಮಸ್ಯೆ ಇರುವ ಹಳ್ಳಿಗಳಿಗೆ ಮೊದಲು ಕುಡಿಯುವ ನೀರು ಸರಬರಾಜು ಮಾಡಬೇಕು. ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು.
ಸದಸ್ಯೆ ರೇಖಾ ಮಾತನಾಡಿ, ಹುಣಸಘಟ್ಟದಲ್ಲಿ ಕುಡಿವ ನೀರಿನ ಸಮಸ್ಯೆ ತುಂಬಾ ಇದೆ. ಅಧಿಕಾರಿಗಳು ಯಾರೂ ಗಮನ ಕೊಡುತ್ತಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು.
ಸೂಚನೆ ನೀಡಿ ಭೇಟಿ ಕೊಡಿ: ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಮಾತನಾಡಿ, ಕಾಮಗಾರಿಗಳನ್ನು ಪರಿಶೀಲಿಸುವಾಗ ಜನಪ್ರತಿನಿಧಿಗಳಿಗೆ ಪೂರ್ವಸೂಚನೆ ನೀಡಿ ಗ್ರಾಮಗಳಿಗೆ ಭೇಟಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸದಸ್ಯ ಸೀತಾರಾಂ ಮಾತನಾಡಿ, ಅಧಿಕಾರಿಗಳದ್ದೇ ಹಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಕೆಲವು ಅಧಿಕಾರಿಗಳು ಸಭೆಗೆ ಬಂದಿಲ್ಲ, ಇನ್ನು ಮುಂದೆ ಹೀಗಾಗಬಾರದು. ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಸದಸ್ಯೆ ಪಾರ್ವತಿಬಾಯಿ ಮಾತನಾಡಿ, ಕರಕುಚ್ಚಿಯಲ್ಲಿ ಕಲುಷಿತ ನೀರು ಬರುತ್ತಿದೆ, ಆಧಿಕಾರಿಗಳು ಗಮನ ಹರಿಸಿಲ್ಲ ಎಂದು ತಿಳಿಸಿದರು.
ಸದಸ್ಯ ಅನ್ಬು ಮಾತನಾಡಿ, ಭದ್ರಾ ಎ.ಇ.ಇ ಅವರನ್ನು ಸಭೆಗೆ ಏಕೆ ಕರೆಸುತ್ತಿಲ್ಲ ಎಂದು ಪ್ರಶ್ನಿಸಿದರು. ತಿಂಗಳಿಗೊಂದು ಸಾರಿ ಸರ್ವ ಸದಸ್ಯರ ಸಭೆ ಏರ್ಪಡಿಸಿ, ನಂತರ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ, ಒಂದೇ ದಿನ ಎಲ್ಲ 29 ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಬಂದು ಕೂತರೆ, ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಪ್ರತ್ಯೇಕವಾಗಿ ಸಭೆಗಳನ್ನು ಏರ್ಪಡಿಸಿ ಎಂದು ಸಲಹೆ ಮಾಡಿದರು.
ಜಾನುವಾರು ತೊಟ್ಟಿ: ಜಿಪಂ ಎಂಜಿನಿಯರಿಂಗ್ ಕಚೇರಿ ಅಧಿಕಾರಿಗಳು ಮಾತನಾಡಿ, 28 ಕಡೆ ಓವರ್ ಹೆಡ್ ಟ್ಯಾಂಕುಗಳನ್ನು, 48 ಜಾನುವಾರು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಭೂಮಿಯನ್ನು ಎಷ್ಟು ಆಳ ಕೊರೆದರೂ ಕೆಲವು ಕಡೆ ನೀರಿನ ಸೆಲೆ ಸಿಗುತ್ತಿಲ್ಲ ಎಂದರು.
ಸದಸ್ಯರಾದ ವಿರೂಪಾಕ್ಷಪ್ಪ, ಧರಣೇಂದ್ರ, ವಿಜಯನಾಯ್ಕ, ಸೀತಾರಾಂ, ರತ್ನಮ್ಮ ಮತ್ತಿತರ ಸದಸ್ಯರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.
ತಾಪಂ ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ತಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.