ಸಂಭ್ರಮದ ಅಂತರಘಟ್ಟಮ್ಮ ಜಾತ್ರೆ
ಕಡೂರು: ಇಲ್ಲಿನ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಬಾನಸೇವೆ ಕಡೂರು ಪಟ್ಟಣದಲ್ಲಿ ಅದ್ಧೂರಿಯಾಗಿ ನೆರವೇರಿತು.
ಕಡೂರು ಪಟ್ಟಣದ ದೊಡ್ಡಪೇಟೆ, ಹಳೇಪೇಟೆ, ಸುಭಾಷ್ ನಗರ ಸೇರಿದಂತೆ ಹಲವು ಬಡಾವಣೆಗಳಿಂದ ಅಂತರಘಟ್ಟಮ್ಮನವರ ಭಕ್ತರು ಪ್ರತಿ ರೈತರ ಮನೆಗಳಿಂದ ಎತ್ತುಗಳನ್ನು ಸಿಂಗರಿಸಿ, ಗಾಡಿಗಳಿಗೆ ಹೊಸ ಬಣ್ಣಹಚ್ಚಿ ಬಾಳೆಗಿಡ, ಮಾವಿನ ಸೊಪ್ಪಿನಿಂದ ಅಲಂಕಾರ ಮಾಡಿ ಪಾನಕವನ್ನು ತುಂಬಿಕೊಂಡು ಹೊರಟ ಬಂಡಿಗಳನ್ನು ಕಟ್ಟುವ ಮೂಲಕ ಕಡೂರು ಪಟ್ಟಣದ ಪೇಟೆ ಬೀದಿಗಳಲ್ಲಿ ಮೆರವಣಿಗೆ ಚಾಲನೆ ನೀಡಲಾಯಿತು.
ಪಾನಕದ ಗಾಡಿಗಳನ್ನು ಸಾಂಪ್ರದಾಯಿಕ ಪೂಜೆ ಹಾಗೂ ವಾದ್ಯಘೋಷಗಳೊಂದಿಗೆ ಕರೆತರಲಾಯಿತು. ಹಲವಾರು ಪಾನಕದ ಗಾಡಿಗಳನ್ನು ಪಟ್ಟಣದ ಕೆ. ಎಲ್. ವಿ. ವೃತ್ತದಿಂದ ಮರವಂಜಿ ವೃತ್ತದ ತನಕ ಮೆರವಣಿಗೆ ಮಾಡಲಾಯಿತು.
ನಂತರ ಬೀರೂರು ವೃತಕ್ಕೆ ತೆರಳಿ ಅಲ್ಲಿಂದ ಛತ್ರದ ಬೀದಿಯಲ್ಲಿರುವ ಕೆಂಚಾಂಬದೇವಿಯವರ ದೇವಾಲಯದತ್ತ ಸಾಗಿದ ಪಾನಕದ ಗಾಡಿಗಳು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದೇವಿಯವರ ದೇವಾಲಯದ ಆವರಣದಲ್ಲಿ ಸೇರಿದ್ದ ನೂರಾರು ಭಕ್ತರಿಗೆ ಪಾನಕ ಹಂಚಲಾಯಿತು.