ಸ್ವಯಂಪ್ರೇರಿತರಾಗಿ ಕೆಜೆಪಿಗೆ ಸೇರ್ಪಡೆ: ಸಂತಸ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕೆಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಸ್ವಯಂಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬಿದಂತಾಗಿದೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಎಚ್. ದೇವರಾಜ್ ಹೇಳಿದ್ದಾರೆ.
ನಗರದ ಬಸವನಹಳ್ಳಿ ಬಡಾವಣೆಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಳಿ ಬಿಜೆಪಿಯ ಜಿಲ್ಲಾ ಮಹಿಳಾ ಮೋರ್ಚಾ ಮುಖಂಡರಾದ ಸುವರ್ಣ ಕೇಶವಮೂರ್ತಿ ಹಾಗೂ ಇತರೆ ಬಿಜೆಪಿ ಕಾರ್ಯಕರ್ತರನ್ನು ಕೆಜೆಪಿ ಪಕ್ಷಕ್ಕೆ ಗುರುವಾರ ಬರಮಾಡಿಕೊಂಡು ಮಾತನಾಡಿದರು.
ನಗರಸಭೆ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷದ ಮಹಿಳಾ ಮತ್ತು ಯುವ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ ಎಂದರು.
ಜಯಕ್ಕೆ ಅಮುಮಾನವಿಲ್ಲ: ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ರೈತರ ಹಾಗೂ ಬಡವರ ಪರ ಆಡಳಿತದಿಂದ ಪಕ್ಷದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಎಲ್ಲಾ ವಾರ್ಡ್ಗಳಲ್ಲೂ ಕೆಜೆಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಭರ್ಜರಿ ಜಯ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಕೆಜೆಪಿ ಕಾರ್ಯದರ್ಶಿ ಸಿ.ಎಚ್. ಲೋಕೇಶ್ ಮಾತನಾಡಿ, ಕೆಜೆಪಿ ಪಕ್ಷಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಲಿದ್ದಾರೆ. ಜಿಲ್ಲೆಯಲ್ಲಿ ಹೊಸ ಪಕ್ಷ ಅಧಿಕಾರಕ್ಕೆ ಬಂದು ಉತ್ತಮ ಅಭಿವೃದ್ಧಿ ಕೆಲಸಗಳ ಮುಖಾಂತರ ಬೇರು ಮಟ್ಟದಿಂದ ಸದೃಢವಾಗಲಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜಮೀಲ್ ಆಹ್ಮದ್ ಉಪಸ್ಥಿತರಿದ್ದರು. ಬಿಜೆಪಿಯ ನಗರ ಉಪಾಧ್ಯಕ್ಷೆ ಭಾನುಮತಿ ಬಾಲಚಂದ್ರ, ರಾಜ್ಯ ಸಮಿತಿ ಸದಸ್ಯೆ ಲಕ್ಷ್ಮೀ ಶ್ಯಾಮರಾವ್, ಮುಖಂಡರುಗಳಾದ ಧನಲಕ್ಷ್ಮೀ ಗೋಪಾಲ್, ಯಶೋಧಮ್ಮ ರಾಜಪ್ಪ, ಸುನಂದ ನಾಗರಾಜ್, ರಾಜಮ್ಮ, ರತ್ನ ರವಿಕುಮಾರ್, ಮಂಜುಳ, ಗೌರಮ್ಮ ಮೊದಲಾದವರು ಈ ಸಂದರ್ಭದಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.