ಎಲ್ಲರಿಗೂ ಸಮಾನ ಅನುದಾನ
ನರಸಿಂಹರಾಜಪುರ: ಸರ್ಕಾರದ ಬಜೆಟ್‌ನಲ್ಲಿ ಒಟ್ಟು ರು. 250 ಕೋಟಿ ಅನುದಾನವನ್ನು ಎಲ್ಲಾ ಧರ್ಮದ ದೇವಾಲಯಗಳಿಗೆ ಭೇದ ಭಾವವಿಲ್ಲದೆ ನೀಡಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ಕೂಸ್ಗಲ್ ರಂಗನಾಥಸ್ವಾಮಿ ಮತ್ತು ಪರಿವಾರ ದೇವರುಗಳ ನೂತನ ದೇವಸ್ಥಾನ ಉದ್ಘಾಟನೆ ಮತ್ತು ಗರ್ಭಗುಡಿ, ಗೋಪುರ, ವಿಗ್ರಹ ಹಾಗೂ ಚೆನ್ನಮ್ಮದೇವಿಯ ನೂತನ ಗೋಪುರ ಹಾಗೂ ಕಲಶ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹೆಚ್ಚಿನ ಅನುದಾನ: ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲಾ ಧರ್ಮದ ದೇವಾಲಾಯಗಳಿಗೂ ಅತಿ ಹೆಚ್ಚು ಅನುದಾನ ನೀಡಿದೆ. ಕೂಸ್ಗಲ್ ದೇವಸ್ಥಾನಕ್ಕೆ ಈಗಾಗಲೇ ರು. 6 ಲಕ್ಷ ಅನುದಾನ ನೀಡಿದ್ದು, ಮತ್ತೆ ರು. 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಹೆಬ್ಬೆ ಭವಾನಿ ಶಂಕರ ದೇವಾಲಯಕ್ಕೆ ರು. 10 ಲಕ್ಷ ಹಾಗೂ ಹಳೇ ಪೇಟೆ ಗುತ್ಯಮ್ಮ ದೇವಸ್ಥಾನಕ್ಕೆ ರು. 8.50 ಲಕ್ಷ ಅನುದಾನ ಮಂಜೂರಾಗಿದೆ. ಕೂಸ್ಗಲ್ ರಸ್ತೆಗೆ ರು. 40 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇವೆ. ಈ ಹಣದಲ್ಲಿ ದೇವಸ್ಥಾನವರೆಗೂ ಟಾರ್ ಹಾಕಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಉತ್ತಮ ಅಭಿವೃದ್ಧಿ: ದೇವಸ್ಥಾನ, ಶಾಲೆಗಳು ಉತ್ತಮವಾಗಿ ನಡೆಯುತ್ತಿದ್ದರೆ ಊರು ಅಭಿವೃದ್ಧಿ ಹೊಂದಲಿದೆ. ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಾ ಪೂಜಾ ಮಂದಿರಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಅಭಿವೃದ್ಧಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾದ್ಯಮದಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಕೂಸ್ಗಲ್ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಹಿಂದೆ ದಾನಿವಾಸ ಹಾಗೂ ಕೂಸ್ಗಲ್ ಸೀಮೆ ಎಂದು ಪ್ರಸಿದ್ಧ ಸೀಮೆಯಾಗಿತ್ತು. ಕೂಸ್ಗಲ್ ದೇವಸ್ಥಾನ ಅಭಿವೃದ್ಧಿಪಡಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬದುಕಿನ ನೆನಪು ಉಳಿಯುವಂತಾಗಿದೆ ಎಂದರು.
ಅಧ್ಯಕ್ಷತೆಯನ್ನು ಕೂಸ್ಗಲ್ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ವಿ. ಚಂದ್ರಶೇಖರ್ ವಹಿಸಿದ್ದರು. ಜಿಪಂ ಸದಸ್ಯೆ ಸುಜಾತ, ಕೂಸ್ಗಲ್ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಕಾಳನಕಟ್ಟೆ ಈರಪ್ಪಗೌಡ, ಶಿವಮೊಗ್ಗದ ಮೂಡಬಾಗಿಲು ಎಂ.ಕೆ. ದಿವಾಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ತಾಪಂ ಸದಸ್ಯ ಜಿ.ಡಿ. ಮಂಜಪ್ಪ, ಹೊನ್ನೇಕೊಡಿಗೆ ಗ್ರಾಪಂ ಅಧ್ಯಕ್ಷ ಗೋಪಾಲಾಚಾರ್ ಉಪಸ್ಥಿತರಿದ್ದರು.
ಸಚಿವ ಡಿ.ಎನ್. ಜೀವರಾಜ್ ಸೇರಿದಂತೆ ದಾನಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಶೈಲಾಕ್ಷಿ ಪ್ರಾರ್ಥಿಸಿದರು.
ಎಚ್.ಎಲ್. ಗುರುಮೂರ್ತಿ ಸ್ವಾಗತಿಸಿದರು. ರಮೇಶ್ ನಿರೂಪಿಸಿದರು. ನಾರ್ವೆ ನಾ.ಸು. ನಾಗೇಂದ್ರಭಟ್ ನೇತೃತ್ವದಲ್ಲಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.