ಕೇಂದ್ರದ ಅಣುಕು ಶವ ಯಾತ್ರೆ
ಮೂಡಿಗೆರೆ: ಹೈದರಾಬಾದ್ ಬಾಂಬ್ ದಾಳಿ ಪ್ರಕರಣವು ಕೇಂದ್ರ ಸರ್ಕಾರದ ಅದಕ್ಷ ಆಡಳಿತಕ್ಕೆ ಕನ್ನಡಿಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಸಾತಿ ಸುಂದರೇಶ್ ಅಭಿಪ್ರಾಯಪಟ್ಟರು.
ಹೈದರಾಬಾದ್ ಬಾಂಬ್ ದಾಳಿಯನ್ನು ಖಂಡಿಸಿ ಪಕ್ಷ ಪಟ್ಟಣದಲ್ಲಿ ನಡೆಸಿದ ಕೇಂದ್ರ ಸರ್ಕಾರದ ಅಣುಕು ಶವ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಬಾಂಬ್ ದಾಳಿ ನಡೆಯುತ್ತಿದೆ. ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ದೇಶದ ಜನತೆ ಜೀವ ಭಯದಲ್ಲೆ ದಿನ ದೂಡಬೇಕಾಗಿದೆ. ಪ್ರಮುಖ ನಗರಗಳಲ್ಲಿಯೇ ಭದ್ರತೆಯ ಕೊರತೆ ಉಂಟಾಗಿ ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆದರೆ ಸಾಮಾನ್ಯ ಪ್ರದೇಶಗಳ ಸ್ಥಿತಿಯೇನು ಎಂದು ಪ್ರಶ್ನಿಸಿದರು.
ಗೃಹ ಇಲಾಖೆ ನಿಷ್ಕ್ರಿಯ: ಈ ದೇಶಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ಹತ್ತಿಕುವಲ್ಲಿ ವಿಫಲವಾದ ಕೇಂದ್ರ ಸರ್ಕಾರ ಅಧಿಕಾರದಿಂದ ದೂರ ಸರಿಯಬೇಕು. ಉಗ್ರರ ದಾಳಿಯ ಕುರಿತು ಸೂಚನೆ ದೊರಕಿತ್ತು ಎಂದು ಹೇಳಿಕೆ ನೀಡಿದ ಕೇಂದ್ರ ಗೃಹ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಈ ಬಾಂಬ್ ದಾಳಿಯನ್ನು ತಡೆಯಬಹುದಾಗಿತ್ತು.
ಬಾಂಬ್ ಸ್ಫೋಟವನ್ನು ತಡೆಯುವಲ್ಲಿ ವಿಫಲವಾದ ಕೇಂದ್ರ ಸರ್ಕಾರವೇ ಘಟನೆಗೆ ನೇರ ಹೊಣೆ ಹೊರಬೇಕು ಎಂದರು.
ಕೇಂದ್ರ ಸರ್ಕಾರದ ಅಣಕು ಶವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಲಯನ್ಸ್ ವೃತ್ತದಲ್ಲಿ ಪ್ರತಿಕೃತಿ ದಹನ ನಡೆಸಲಾಯಿತು. ಪ್ರಕಾಶ್, ಬಾಬು, ಆನಂದ್, ಸತೀಶ್, ರವಿ, ರಘು, ಗುಂಡಣ್ಣ, ಕೃಷ್ಣಮೂರ್ತಿ, ಆನಂದ್ ಮುಂತಾದವರು ಭಾಗವಹಿಸಿದ್ದರು.